ಮೂರು ತಿಂಗಳ ಬಳಿಕ ಸಕ್ರಿಯ ಬ್ಯಾಡ್ಮಿಂಟನ್ ಗೆ ಮೊಮೊಟಾ ವಾಪಸ್

Update: 2020-02-09 18:47 GMT

ಟೋಕಿಯೊ, ಫೆ.9: ವಿಶ್ವದ ನಂ.1 ಬ್ಯಾಡ್ಮಿಂಟನ್ ಆಟಗಾರ ಕೆಂಟೊ ಮೊಮೊಟಾ ಮಲೇಶ್ಯದಲ್ಲಿ ಜನವರಿ 13ರಂದು ಟ್ರಾಫಿಕ್ ಅಪಘಾತದಲ್ಲಿ ಮೂಗು ಮುರಿತಕ್ಕೆ ಒಳಗಾಗಿದ್ದರು. ಇದೀಗ ಬಲಗಣ್ಣಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಇನ್ನೂ ಮೂರು ತಿಂಗಳ ವಿರಾಮದ ಬಳಿಕ ಸಕ್ರಿಯ ಬ್ಯಾಡ್ಮಿಂಟನ್‌ಗೆ ವಾಪಸಾಗಲಿದ್ದಾರೆ.

ಮೊಮೊಟಾ ಕಳೆದ ವಾರ ರಾಷ್ಟ್ರೀಯ ತಂಡದ ತರಬೇತಿಗೆ ವಾಪಸಾಗಿದ್ದರು. ಆದರೆ, ಅವರು ಸಂಪೂರ್ಣ ಚೇತರಿಸಿಕೊಂಡಿರಲಿಲ್ಲ ಎಂದು ಅವರ ಕ್ಲಬ್ ಎನ್‌ಟಿಟಿ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಮೊಮೊಟಾ ಶುಕ್ರವಾರ ತರಬೇತಿ ಶಿಬಿರವನ್ನು ತೊರೆದ ಬಳಿಕ ಬಲಗಣ್ಣಿನ ಚಿಕಿತ್ಸೆಗೆ ಒಳಗಾಗಿದ್ದಾರೆ. ಶನಿವಾರ ಅವರಿಗೆ ನಡೆಸಲಾಗಿರುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸಂಪೂರ್ಣ ಚೇತರಿಸಿಕೊಳ್ಳಲು ಮೂರು ತಿಂಗಳ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ''ಮಾ.11ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಮೊಮೊಟಾ ಸಜ್ಜಾಗಿದ್ದಾರೆ'' ಎಂದು ಜಪಾನ್‌ನ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ಝೆನಿಯಾ ಕಿನ್‌ಜಿ ಹೇಳಿದ್ದಾರೆ.

ಕಳೆದ ವರ್ಷ ಮೊಮೊಟಾ 11 ಅಂತರ್‌ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಜಯ ಸಾಧಿಸಿದ್ದು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ ಜಪಾನ್‌ನ ಮೊದಲ ಆಟಗಾರನಾಗುವತ್ತ ಚಿತ್ತವಿರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News