ಪಾಕ್‌ಗೆ ತೆರಳಿ ವಿವಾದ ಸೃಷ್ಟಿಸಿದ ಭಾರತದ ಕಬಡ್ಡಿ ತಂಡ

Update: 2020-02-09 18:55 GMT

ಹೊಸದಿಲ್ಲಿ, ಫೆ .9: ವಿಶ್ವ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಭಾರತದ ಕಬಡ್ಡಿ ತಂಡ ಪಾಕಿಸ್ತಾನಕ್ಕೆ ತೆರಳಿದೆ. ಇದು ಕ್ರೀಡಾ ಸಚಿವಾಲಯ ಮತ್ತು ರಾಷ್ಟ್ರೀಯ ಒಕ್ಕೂಟದೊಂದಿಗೆ ವಿವಾದಕ್ಕೆ ನಾಂದಿ ಹಾಡಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಯಾವುದೇ ಕ್ರೀಡಾಪಟುವಿಗೂ ಸರಕಾರ ಅನುಮತಿ ನೀಡಿಲ್ಲ ಎಂದು ಕ್ರೀಡಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನ ಮೊದಲ ಬಾರಿಗೆ ಕಬಡ್ಡಿ ಚಾಂಪಿಯನ್‌ಶಿಪ್‌ನ್ನು ಆಯೋಜಿಸಿದೆ. ಭಾರತದ ಕಬಡ್ಡಿ ತಂಡ ಶನಿವಾರ ವಾಘಾ ಗಡಿ ಮೂಲಕ ಲಾಹೋರ್ ತಲುಪಿದೆ. ಲಾಹೋರ್‌ಗೆ ಭಾರತದ ತಂಡ ಆಗಮಿಸಿದ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಲಾಹೋರ್‌ನ ಪಂಜಾಬ್ ಫುಟ್ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ಕಬಡ್ಡಿ ಚಾಂಪಿಯನ್‌ಶಿಪ್ ಆರಂಭವಾಗಲಿದ್ದು, ನಂತರ ಕೆಲವು ಪಂದ್ಯಗಳು ಫೈಸಲಾಬಾದ್ ಮತ್ತು ಗುಜರಾತ್‌ನಲ್ಲಿ ನಡೆಯಲಿವೆ.

ಕ್ರೀಡಾ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯವು ತಂಡಕ್ಕೆ ಯಾವುದೇ ಅನುಮತಿಯನ್ನು ನೀಡಿಲ್ಲ. ಯಾವುದೇ ಅಂತರ್‌ರಾಷ್ಟ್ರೀಯ ಇವೆಂಟ್‌ನಲ್ಲಿ ದೇಶವನ್ನು ಪ್ರತಿನಿಧಿಸುವಾಗ ತಂಡಗಳು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಕ್ರೀಡಾ ಸಚಿವಾಲಯದ ಮೂಲಗಳು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿವೆೆ.ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ (ಎಕೆಎಫ್‌ಐ) ಇದರ ಆಡಳಿತಾಧಿಕಾರಿ ನ್ಯಾಯಮೂರ್ತಿ (ನಿವೃತ್ತ) ಎಸ್‌ಪಿ ಗರ್ಗ್‌‘‘ಯಾವುದೇ ತಂಡ ಪಾಕಿಸ್ತಾನಕ್ಕೆ ತೆರಳುವ ವಿಚಾರದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಪಾಕಿಸ್ತಾನದಲ್ಲಿ ನಡೆಯಲಿರುವ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ನಾವು ಯಾವುದೇ ತಂಡಕ್ಕೂ ಅನುಮತಿ ನೀಡಿಲ್ಲ’’ಎಂದು ಹೇಳಿದ್ದಾರೆ.

 ಎಕೆಎ  ್ಐ ಅಂತಹ ಯಾವುದೇ ಚಟುವಟಿಕೆಯನ್ನು ಬೆಂಬಲಿಸುವುದಿಲ್ಲ. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಬಹುದು ಎಂದು ಗರ್ಗ್ ಹೇಳಿದ್ದಾರೆ.   

 ಯಾವುದೇ ತಂಡವು ವಿದೇಶಿ ಕಾರ್ಯಕ್ರಮಗಳಲ್ಲಿ ಭಾಗವಹಿಸ ಬೇಕಾದರೆ ರಾಷ್ಟ್ರೀಯ ಒಕ್ಕೂಟವು ಕ್ರೀಡಾ ಸಚಿವಾಲಯದೊಂದಿಗೆ ಈ ಸಂಬಂಧ ಸಂವಹನ ನಡೆಸಬೇಕಾಗುತ್ತದೆ. ಕ್ರೀಡಾ ಸಚಿವಾಲಯ ಎಂಇಎಗೆ ಮತ್ತು ಭದ್ರತಾ ಅನುಮತಿಗಾಗಿ ಗೃಹ ಸಚಿವಾಲಯಕ್ಕೆ ಪತ್ರ ಬರೆಯುತ್ತದೆ. ಎಕೆಎಫ್‌ಐಗೆ 2018 ರಲ್ಲಿ ನಡೆದ ಚುನಾವಣೆಯನ್ನು ದಿಲ್ಲಿ ಹೈಕೋರ್ಟ್ ್ನತಡೆ ಹಿಡಿದ ನಂತರ ಎಕೆಎಫ್‌ಐ ನ್ನು ಪ್ರಸ್ತುತ ಆಡಳಿತಾಧಿಕಾರಿ ಜಸ್ಟಿಸ್ (ನಿವೃತ್ತ) ಗರ್ಗ್ ನಡೆಸುತ್ತಿದ್ದಾರೆ.

   ಪಾಕಿಸ್ತಾನದ ಪಂಜಾಬ್ ಕ್ರೀಡಾ ಸಚಿವ ರಾಯ್ ತೈಮೂರ್ ಖಾನ್ ಭಟ್ಟಿ ಅವರು ಪಾಕಿಸ್ತಾನಕ್ಕೆ ತೆರಳಿರುವ ಭಾರತೀಯ ಕಬಡ್ಡಿ ತಂಡವನ್ನು ಲಾಹೋರ್ ಹೋಟೆಲ್‌ನಲ್ಲಿ ಸ್ವಾಗತಿಸಿದರು. ಭಾರತದ ತಂಡ ವಾಘಾ ಗಡಿಯಿಂದ ಪಾಕಿಸ್ತಾನಕ್ಕೆ ಕಾಲಿರಿಸಿದಾಗ ಅವರನ್ನು ಪಾಕಿಸ್ತಾನ ಕಬಡ್ಡಿ ಫೆಡರೇಶನ್‌ನ ಅಧಿಕಾರಿಗಳು ಹಾರಾರ್ಪಣೆಗೈದು ಸ್ವಾಗತಿಸಿದರು, ಅಲ್ಲಿಂದ ಅವರನ್ನು ಲಾಹೋರ್‌ನಲ್ಲಿರುವ ತಮ್ಮ ಹೊಟೇಲ್‌ಗೆ ಬಿಗು ಭದ್ರತೆಯಲ್ಲಿ ಕರೆದೊಯ್ಯಲಾಯಿತು.

  2010 ಮತ್ತು 2019ರ ತನಕ ವಿಶ್ವ ಕಬಡ್ಡಿ ಚಾಂಪಿಯನ್‌ಶಿಪ್‌ನ ಹಿಂದಿನ ಎಲ್ಲಾ ಆರು ಆವೃತ್ತಿಗಳು ಭಾರತದಲ್ಲಿ ನಡೆದಿವೆ. ಭಾರತ ಎಲ್ಲಾ ಆರು ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದೆ. 2010, 2012, 2013 ಮತ್ತು 2014 ಆವೃತ್ತಿಗಳಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಈ ಬಾರಿ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್, ಜರ್ಮನಿ, ಇರಾನ್, ಅಝೆರ್‌ಬೈಜಾನ್, ಸಿಯೆರಾ ಲಿಯೋನ್, ಕೀನ್ಯಾ ಮತ್ತು ಕೆನಡಾ ತಂಡಗಳು ಭಾಗವಹಿಸುತ್ತಿವೆ ಎಂದು ಪಾಕಿಸ್ತಾನ ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News