ಕಲ್ಲರಕೋಡಿಯಲ್ಲಿ ಕಲ್ಲು ಕೋರೆಗೆ ಸ್ಥಳೀಯರ ವಿರೋಧ: ಕಾಮಗಾರಿ ಸ್ಥಗಿತಕ್ಕೆ ಒತ್ತಾಯಿಸಿ ಪಂಚಾಯಿತಿಗೆ ಮುತ್ತಿಗೆ

Update: 2020-02-10 18:35 GMT

ಕೊಣಾಜೆ:  ನರಿಂಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲರಕೋಡಿ ಬಳಿ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಕೋರೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ನರಿಂಗಾನ ಗ್ರಾ.ಪಂ.ಗೆ  ಸೋಮವಾರ ಮುತ್ತಿಗೆ ಹಾಕಿ ಕೂಡಲೇ ಕಾಮಗಾರಿಗೆ ತಡೆಯುವಂತೆ ಮನವಿ ಮಾಡಿದರು.

ನರಿಂಗಾನ ಗ್ರಾಮದ ಕಲ್ಲರಕೋಡಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಒಂದು ಎಕರೆ ಜಾಗವನ್ನು ಕೋರೆಗೆ ಲೀಸ್‍ಗೆ  ನೀಡಿತ್ತು. ಇದರ ಲೀಸ್‍ನ ಅವಧಿ ಮುಗಿದಿದ್ದರೂ ಇಲ್ಲಿ ಕೋರೆ ಕಾಮಗಾರಿ ನಿರಂತರ ನಡೆಯುತ್ತಿತ್ತು ಎನ್ನಲಾಗಿದೆ.  ಈ ವಿಷಯ ಸ್ಥಳೀಯರ ಗಮನಕ್ಕೆ ಬಂದಿದ್ದು, ಬಳಿಕ ಅವರು ಸೋಮವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕೋರೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಆರಂಭದಲ್ಲಿ ಗ್ರಾಮಸ್ಥರು ಪಂಚಾಯಿತಿಗೆ ಮುತ್ತಿಗೆ ಹಾಕಿದ ಸಂದರ್ಭ ನರಿಂಗಾನ ಪಂಚಾಯಿತಿಯಲ್ಲಿ ಗ್ರಾಮಕರಣಿಕರು ಇರಲಿಲ್ಲ. ಅವರನ್ನು ಕರೆಸಿ ಸರ್ವೆ ಮಾಡಬೇಕು ಎಂದು ನಾಗರಿಕರ ಒತ್ತಾಯ ತೀವ್ರಗೊಂಡ ಹಿನ್ನೆಲೆಯಲ್ಲಿ  ಪಂಚಾಯಿತಿ ಅಧ್ಯಕ್ಷ  ಇಸ್ಮಾಯಿಲ್ ಅವರು ಗ್ರಾಮಕರಣಿಕರಿಗೆ ಮಾಹಿತಿ ನೀಡಿ ಅವರನ್ನು ಕರೆಸಿದರು. ಬಳಿಕ ಘಟನೆ ನಡೆದ ಸ್ಥಳಕ್ಕೆ ಅಧ್ಯಕ್ಷ ಇಸ್ಮಾಯಿಲ್, ಗ್ರಾಮಕರಣಿಕ ಧರ್ಮರಾಜ್, ಪಿಡಿಒ ರಜನಿ  ಭೇಟಿ ನೀಡಿ ಪರಿಶೀಲನೆ  ನಡೆಸಿದರು. ಬಳಿಕ ಕೋರೆಯ ಮಾಲಕ ವಿಶ್ವ ಕಟೀಲ್ ರಿಗೆ ಗ್ರಾಮಕರಣಿಕ ಧರ್ಮರಾಜ್  ಕರೆ ಮಾಡಿ ದಾಖಲೆ ಒದಗಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಈ ಕೋರೆಯಿಂದ ಜನರಿಗೆ ಆಗುವ ತೊಂದರೆಯ ಬಗ್ಗೆ ಆರ್ ಎನ್ ಐ ಮತ್ತು ತಹಶೀಲ್ದಾರ್ ಅವರಿಗೂ ಮಾಹಿತಿ ನೀಡಿದರು. ಈ ಬಗ್ಗೆ ತನಿಖೆ ನಡೆಸಿ ಎರಡು ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

ಮೈದಾನದ ಸ್ಥಳ ?
ಕಲ್ಲರಕೋಡಿಯಲ್ಲಿರುವ ಶಾಲೆಯ ಬಳಿ ಸರಕಾರಿ ಮೈದಾನ ಇಲ್ಲ. ಇಲ್ಲಿಗೆ ಸೂಕ್ತ ಮೈದಾನ ವ್ಯವಸ್ಥೆ ಮಾಡಿ ಕೊಡಬೇಕೆಂದು ಪಂಚಾಯಿತಿಗೆ ಸ್ಥಳೀಯರು ಮನವಿ ಅರ್ಪಿಸಿದ್ದರು.ಅವರ ಮನವಿ ಮೇರೆಗೆ 2014ರಲ್ಲಿ ಐದು ಎಕರೆ ಸ್ಥಳ  ಮಂಜೂರು ಮಾಡಲಾಗಿತ್ತು. ಈ ಕಾರಣದಿಂದ ಸರ್ವೇ ಕೂಡಾ ಮಾಡಲಾಗಿತ್ತು. ಗಡಿ ಗುರುತು ಸಿಗದ ಕಾರಣ ಪೂರ್ಣವಾಗಿರಲಿಲ್ಲ.  ಇದೀಗ ಕಲ್ಲಿನ ಕೋರೆ ನಡೆಸಿದ ಜಾಗ ಮೈದಾನಕ್ಕೆ ಸೇರುವ ಸ್ಥಳ ಎನ್ನುವುದು ಸ್ಥಳೀಯರ ಆರೋಪ. ಈ ಕಾರಣದಿಂದ ಕೋರೆಯ ವಿರುದ್ಧ ಧ್ವನಿ ಎತ್ತಲಾಗಿದೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಕಲ್ಲಿನ ಕೋರೆ ಸ್ಥಗಿತಗೊಳಿಸಲಾಗುವುದು. ಲೀಸ್‍ಗೆ ನೀಡಿದ ಜಾಗ ಯಾವುದು ಎಂದು ಪರಿಶೀಲನೆ ಮಾಡಿ ನೋಡುತ್ತೇವೆ. ಇದಕ್ಕಾಗಿ ಸರ್ವೇ ಕೂಡಾ ಮಾಡಿಸಲಾಗುವುದು. ಅವರನ್ನು ದಾಖಲೆ ಸಹಿತ ಕಚೇರಿಗೆ ಬರಲು ಸೂಚಿಸಿದ್ದೇನೆ. ಅಕ್ರಮ ಗಣಿಗಾರಿಕೆ ಆಗಿದ್ದಲ್ಲಿ ಅದಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು.

- ಧರ್ಮರಾಜ್, ಗ್ರಾಮಕರಣಿಕ, ನರಿಂಗಾನ ಗ್ರಾ.ಪಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News