ಹಿಂದುಗಳಿಗೆ ಶಸ್ತ್ರಾಸ್ತ್ರ ತರಬೇತಿಯ ಅಗತ್ಯವಿದೆ: ಬಿಜೆಪಿ ಶಾಸಕನ ಹೇಳಿಕೆ

Update: 2020-02-11 14:39 GMT

ಹೊಸದಿಲ್ಲಿ, ಫೆ.11: ಹಿಂದುಗಳು ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪ್ರಯೋಗದ ತರಬೇತಿ ಪಡೆಯಬೇಕು. ಎಲ್ಲಾ ಹಿಂದುಗಳೂ ಒಗ್ಗೂಡಿದರೆ ಮಾತ್ರ ಹಿಂದು ರಾಷ್ಟ್ರ ನಿರ್ಮಾಣದ ಕನಸು ನನಸಾಗುತ್ತದೆ ಎಂದು ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಹೇಳಿದ್ದಾರೆ.

ಮಹಾರಾಷ್ಟ್ರದ ಜಲ್ನ ಎಂಬಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಿಂಗ್, 2023ರ ಒಳಗೆ ಭಾರತ ಹಿಂದೂ ರಾಷ್ಟ್ರವಾಗಲಿದೆ . ಭಾರತ ಹಿಂದೂ ರಾಷ್ಟ್ರವಾಗಬೇಕಿದ್ದರೆ ಶಿವಾಜಿ ಮಹಾರಾಜರ ಚಿಂತನೆಯ ಅಗತ್ಯವಿದೆ ಎಂದು ಹೇಳಿದರು.

ಅಕ್ರಮ ಒಳನುಸುಳುಕೋರರನ್ನು ದೇಶದಿಂದ ಹೊರಗಟ್ಟಲು ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿ ಪ್ರಕ್ರಿಯೆ ಅತ್ಯಗತ್ಯವಾಗಿದೆ ಎಂದ ಅವರು, ಹಿಂದುಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ಶಿಬಿರಗಳನ್ನು ಆಯೋಜಿಸುವ ಬಗ್ಗೆ 6 ತಿಂಗಳ ಹಿಂದೆ ನಿರ್ಧರಿಸಿದ್ದೆವು. ಇದರಂತೆ ದಿನಾಂಕವನ್ನು ನಿಗದಿಗೊಳಿಸಿ ಶಿಬಿರದಲ್ಲಿ ಪಾಲ್ಗೊಳ್ಳಲು ಹಿಂದುತ್ವವಾದಿ ಧೀರರು ಹಾಗೂ ದೇಶಭಕ್ತರನ್ನು ಆಹ್ವಾನಿಸಿದ್ದೆವು. ದೇಶದ ಪ್ರತಿಯೊಬ್ಬ ಯುವಜನತೆಯನ್ನೂ ಯೋಧರಂತೆ ತರಬೇತುಗೊಳಿಸಲು ಶಿಬಿರದಲ್ಲಿ ಪ್ರತಿಜ್ಞೆ ಸ್ವೀಕರಿಸಲಾಗಿದೆ. ಸೇನೆಯು ದೇಶದ ಹೊರಗಡೆಯ ದ್ರೋಹಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ದೇಶದ ಒಳಗಿರುವ ದೇಶದ್ರೋಹಿಗಳನ್ನು ನಿಗ್ರಹಿಸುವ ಪಡೆಯ ಅಗತ್ಯವಿದೆ. ಇಂತಹ ಪಡೆ ಈಗ ಸಿದ್ಧಗೊಂಡಿದೆ ಎಂದು ರಾಜಾ ಸಿಂಗ್ ಹೇಳಿದ್ದಾರೆ.

ಪ್ರಚೋದಕ ಹೇಳಿಕೆ ಹಾಗೂ ದ್ವೇಷ ಭಾಷಣದ ಮೂಲಕ ಎರಡು ಗುಂಪುಗಳ ಮಧ್ಯೆ ವೈಷಮ್ಯ ಹೆಚ್ಚಿಸಿದ ಆರೋಪ ಸಹಿತ ಹಲವು ಪ್ರಕರಣಗಳು ಸಿಂಗ್ ವಿರುದ್ಧ ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News