×
Ad

ಫೆ.25ರಂದು ಮೈಕ್ರೋಫೈನಾನ್ಸ್ ಸಾಲಮನ್ನಾಕ್ಕಾಗಿ ವಿಧಾನಸೌಧ ಚಲೋ

Update: 2020-02-11 20:38 IST

ಉಡುಪಿ, ಫೆ.11: ಬಡ ಮಹಿಳೆಯರು ಮೈಕ್ರೋ ಫೈನಾನ್ಸ್‌ಗಳಿಂದ ಪಡೆದ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಿಸಿ ಫೆ.25ರಂದು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿಧಾನಸೌಧ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ವಕೀಲ ಬಿ.ಎಂ.ಭಟ್, ಮೈಕ್ರೋ ಫೈನಾನ್ಸ್‌ಗಳ ಸಾಲದ ಸುಳಿಗೆ ಬಿದ್ದ ಬಡ ಮಹಿಳೆಯರ ಸಾಲ ಮನ್ನಾ ಮಾಡಬೇಕು. ಮೈಕ್ರೋ ಫೈನಾನ್ಸ್‌ಗಳ ಅವ್ಯವಹಾರ ಮತ್ತು ದೌರ್ಜನ್ಯಗಳ ವಿರುದ್ಧ, ಫೈನಾನ್ಸ್‌ಗಳ ಕಾನೂನು ವಿರೋದಿ ವ್ಯವಹಾರಗಳನ್ನು ಮೋರ್ಟೋರಿಯಂಗೊಳಿಸಬೇಕು. ಸರಕಾರ ಈ ಫೈನಾನ್ಸ್‌ಗಳನ್ನು ಮುಟ್ಟುಗೋಲು ಹಾಕಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು. ಈ ಹೋರಾಟದಲ್ಲಿ ಜಿಲ್ಲೆಯ 20ಸಾವಿರ ಸೇರಿದಂತೆ ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.

ಕಾನೂನು ಪ್ರಕಾರ ಬಲತ್ಕಾರ ಸಾಲ ವಸೂಲಾತಿ ಮಾಡಬಾರದು ಮತ್ತು ಮನೆಗಳಿಗೆ ಹೋಗಿ ಸಾಲ ವಸೂಲಿ ಮಾಡುವಂತೆ ಇಲ್ಲ. ಆದರೂ ಮೈಕ್ರೋ ಫೈನಾನ್ಸ್‌ಗಳು ಮಹಿಳೆಯರನ್ನು ಬೆದರಿಸಿ, ನಿರಂತರ ಮನೆಗಳಿಗೆ ತೆರಳಿ ಹಿಂಸೆ ನೀಡಿ ದೌರ್ಜನ್ಯ ಎಸಗುತ್ತಿದೆ. ಈ ಫೈನಾನ್ಸ್‌ಗಳು ಸಾಲ ನೀಡಿರುವ ಬಗ್ಗೆ 2013ರ ನಂತರ ಸರಕಾರಕ್ಕೆ ಸರಿಯಾದ ಲೆಕ್ಕವನ್ನೇ ನೀಡಿಲ್ಲ ಎಂದು ಅವರು ದೂರಿದರು.

ಇಂದು ಕೆಲವು ಮೈಕ್ರೋಫೈನಾನ್ಸ್‌ಗಳ ಏಜೆಂಟರು ಸಾಲಮನ್ನಾದ ದಾರಿ ತಪ್ಪಿಸಲು, ಜನರ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಲು ತಪ್ಪು ಅಭಿಪ್ರಾಯ ಮೂಡಿಸಲು ಅಪಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ 10 ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದ್ದು, ವಾರ್ಷಿಕ ಸದಸ್ಯತ್ವವಾಗಿ ಪ್ರತಿಯೊಬ್ಬರಿಂದ 120ರೂ. ಸಂಗ್ರಹಿಸುತ್ತಿದ್ದೇವೆ. ಈ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಸದಸ್ಯತ್ವ ಮಾಡುವುದನ್ನೇ ದೊಡ್ಡ ತಪ್ಪು ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಮಂಜುನಾಥ್ ಬೈಲೂರು, ಪ್ರಧಾನ ಸಂಚಾಲಕ ಸುನೀಲ್ ಹೆಗ್ಡೆ, ಭಾಗ್ಯಲಕ್ಷ್ಮೀ, ಮಮತಾ ಆರ್.ಪಡು ಬೆಳ್ಳೆ, ಆನಂದ ಗಿರಿನಗರ, ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News