ಸೋಂಕು ನಿಗ್ರಹ ಕ್ರಮಗಳಿಂದ ಆರ್ಥಿಕತೆಗೆ ಬೆದರಿಕೆ: ಜಿನ್‌ಪಿಂಗ್

Update: 2020-02-11 15:55 GMT
file photo

ಬೀಜಿಂಗ್, ಫೆ. 11: ಕೊರೋನವೈರಸ್ ಸೋಂಕನ್ನು ನಿಯಂತ್ರಿಸಲು ಹಲವಾರು ತೀವ್ರ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಅವುಗಳು ದೇಶದ ಆರ್ಥಿಕತೆಗೆ ಬೆದರಿಕೆಯಾಗಿ ಪರಿಣಮಿಸಿವೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್ ಕಳೆದ ವಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಮೂರು ದಶಕಗಳಲ್ಲೇ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯ ಹಿನ್ನೆಲೆಯಲ್ಲಿ, ಈಗಾಗಲೇ ನಿಧಾನಗೊಂಡಿರುವ ಆರ್ಥಿಕತೆಯನ್ನು ರಕ್ಷಿಸುವ ಮತ್ತು 1,000ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿರುವ ಸೋಂಕನ್ನು ಮೂಲೋತ್ಪಾಟನೆಗೊಳಿಸುವ ಕ್ರಮಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಚೀನಾದ ನಾಯಕರು ಪ್ರತಿಪಾದಿಸಿದ್ದಾರೆ.

 ವೈರಸ್ ಹರಡುವಿಕೆಯನ್ನು ತಡೆಯಲು ತೆಗೆದುಕೊಳ್ಳಲಾಗಿರುವ ಕೆಲವು ಕ್ರಮಗಳು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿವೆ ಎಂದು ಫೆಬ್ರವರಿ 3ರಂದು ನಡೆದ ಪಾಲಿಟ್‌ಬ್ಯೂರೋದ ಸ್ಥಾಯಿ ಸಮಿತಿ ಸಭೆಯಲ್ಲಿ ಸ್ಥಳೀಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಕ್ಸಿ ಜಿನ್‌ಪಿಂಗ್ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಇನ್ನೂ ಹೆಚ್ಚಿನ ನಿರ್ಬಂಧಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದಂತೆ ಚೀನಾ ಅಧ್ಯಕ್ಷರು ಸ್ಥಳೀಯ ನಾಯಕರನ್ನು ಒತ್ತಾಯಿಸಿದರು.

ಸೋಂಕು ಹರಡುವುದನ್ನು ನಿಯಂತ್ರಿಸುವ ಕ್ರಮವಾಗಿ, ಚೀನಾದ ಹಲವು ನಗರಗಳಲ್ಲಿ ಅಧಿಕಾರಿಗಳು ಶಾಲೆಗಳು ಮತ್ತು ಕಾರ್ಖಾನೆಗಳನ್ನು ಮುಚ್ಚಿದ್ದಾರೆ, ರಸ್ತೆಗಳು ಮತ್ತು ರೈಲು ಮಾರ್ಗಗಳನ್ನು ಮುಚ್ಚಿದ್ದಾರೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ. ಅದೂ ಅಲ್ಲದೆ, ಅವರು ವಾಸ್ತವ್ಯ ಕಟ್ಟಡಗಳಿಗೂ ಬೀಗಮುದ್ರೆ ಜಡಿದಿದ್ದಾರೆ.

ಅಧಿಕಾರಿಗಳು ತೆಗೆದುಕೊಂಡಿರುವ ಈ ಕ್ರಮಗಳು ಪ್ಯಾಯೋಗಿಕವಾಗಿಲ್ಲ ಹಾಗೂ ಅವುಗಳು ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ ಎಂದು ಚೀನಾ ಅಧ್ಯಕ್ಷರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News