ಅಹ್ಮದಾಬಾದ್‌ನಲ್ಲಿ 50-70 ಲಕ್ಷ ಜನ ಸೇರುತ್ತಾರೆ ಎಂದು ಮೋದಿ ಹೇಳಿದ್ದಾರೆ: ಟ್ರಂಪ್

Update: 2020-02-12 14:44 GMT
ಫೈಲ್ ಚಿತ್ರ

ವಾಶಿಂಗ್ಟನ್, ಫೆ. 12: ಈ ತಿಂಗಳ 24 ಮತ್ತು 25ರಂದು ಭಾರತಕ್ಕೆ ಪ್ರಥಮ ಭೇಟಿ ನೀಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತನ್ನ ಭಾರತ ಪ್ರವಾಸದ ಅವಧಿಯಲ್ಲಿ ಟ್ರಂಪ್ ಹೊಸದಿಲ್ಲಿ ಮತ್ತು ಗುಜರಾತ್‌ನ ಅಹ್ಮದಾಬಾದ್ ನಗರಕ್ಕೆ ಭೇಟಿ ನೀಡಲಿದ್ದಾರೆ. ಅಹ್ಮದಾಬಾದ್‌ ನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಲಿದ್ದಾರೆ.

‘‘ಅವರು (ಮೋದಿ) ಓರ್ವ ಅತ್ಯಂತ ಸಂಭಾವಿತ ವ್ಯಕ್ತಿ (ಗ್ರೇಟ್ ಜಂಟಲ್‌ಮ್ಯಾನ್). ಭಾರತಕ್ಕೆ ಹೋಗುವುದನ್ನು ನಾನು ಎದುರು ನೋಡುತ್ತಿದ್ದೇನೆ’’ ಎಂದು ತನ್ನ ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಟ್ರಂಪ್‌ರ ಭಾರತ ಪ್ರವಾಸದ ದಿನಾಂಕವನ್ನು ಶ್ವೇತಭವನ ಪ್ರಕಟಿಸಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

‘‘ಈಗಷ್ಟೇ ಪ್ರಧಾನಿ ಮೋದಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದೆ. ಅಹ್ಮದಾಬಾದ್‌ನಲ್ಲಿ ನನ್ನನ್ನು ಸ್ವಾಗತಿಸಲು ಲಕ್ಷಾಂತರ ಭಾರತೀಯರು ಕಾಯುತ್ತಿದ್ದಾರೆ ಎಂದು ಮೋದಿ ಹೇಳಿದರು’’ ಎಂದು ಟ್ರಂಪ್ ಹೇಳಿದರು.

ಸೆಪ್ಟಂಬರ್ 22ರಂದು ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್‌ನಲ್ಲಿ ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯರು ಆಯೋಜಿಸಿದ ‘ಹೌಡಿ ಮೋದಿ’ ಎಂಬ ಹೆಸರಿನ ಸಭೆಯಲ್ಲಿ ಮೋದಿ ಜೊತೆಗೆ ಟ್ರಂಪ್ ಕೂಡ ಭಾಗವಹಿಸಿದ್ದರು. ಸುಮಾರು 50,000 ಭಾರತೀಯರು ಅಂದಿನ ಸಭೆಯಲ್ಲಿ ಭಾಗವಹಿಸಿದ್ದರು.

 ‘‘ಲಕ್ಷಗಟ್ಟಳೆ ಜನರನ್ನು ನಾವು ಆಯೋಜಿಸುತ್ತೇವೆ ಎಂದು ಮೋದಿ ಹೇಳಿದರು. ನನ್ನ ಸಮಸ್ಯೆ ಏನೆಂದರೆ, ನಿನ್ನೆ ರಾತ್ರಿ ನಡೆದ ಸಭೆಯಲ್ಲಿ 40ರಿಂದ 50 ಸಾವಿರ ಜನರಿದ್ದರು. ಆದರೆ, ಭಾರತದಲ್ಲಿ ವಿಮಾನ ನಿಲ್ದಾಣದಿಂದ ಅಹ್ಮದಾಬಾದ್‌ನ ನೂತನ ಸ್ಟೇಡಿಯಂವರೆಗೆ 50ರಿಂದ 70 ಲಕ್ಷ ಜನರಿರುತ್ತಾರೆ’’ ಎಂದು ಟ್ರಂಪ್ ಹೇಳಿದರು.

ಇಂಥ ಬೃಹತ್ ಸಾರ್ವಜನಿಕ ಸಭೆಯೊಂದನ್ನು ಏರ್ಪಡಿಸುವಂತೆ ಟ್ರಂಪ್ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.

ನಮ್ಮಲ್ಲಿ ಜನ ಸೇರುವುದು ಕಡಿಮೆಯಾಯಿತು

‘‘(ಅಹ್ಮದಾಬಾದ್‌ನಲ್ಲಿ) ಇಷ್ಟು ದೊಡ್ಡ ಗಾತ್ರದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಳಿಕ, ಇನ್ನು ನನ್ನ ಚುನಾವಣಾ ಪ್ರಚಾರ ಸಭೆಗಳಿಗೆ ಹಾಜರಾಗುವ ಸಭಿಕರ ಗಾತ್ರದ ಬಗ್ಗೆ ನನಗೆ ತೃಪ್ತಿ ಇರುವುದಿಲ್ಲ’’ ಎಂದು ಟ್ರಂಪ್ ಲಘು ಧಾಟಿಯಲ್ಲಿ ಹೇಳಿದರು. ಅಮೆರಿಕದ ಚುನಾವಣಾ ಪ್ರಚಾರ ಸಭೆಗಳಿಗೆ ಹೆಚ್ಚೆಂದರೆ 40,000ದಿಂದ 50,000 ಜನರು ಆಗಮಿಸುತ್ತಾರೆ.

‘ಸರಿಯಾದ ಒಪ್ಪಂದ’ಕ್ಕೆ ಮಾತ್ರ ಸಹಿ: ಟ್ರಂಪ್

ನನ್ನ ಭಾರತ ಪ್ರವಾಸದ ವೇಳೆ ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದವೊಂದು ಏರ್ಪಡಬಹುದಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ‘ಸರಿಯಾದ ಒಪ್ಪಂದ’ ಮಾತ್ರ ಏರ್ಪಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತ ಭೇಟಿಯ ವೇಳೆ, ವ್ಯಾಪಾರ ಒಪ್ಪಂದವೊಂದಕ್ಕೆ ಸಹಿ ಹಾಕುವ ನಿರೀಕ್ಷೆಯನ್ನು ಹೊಂದಿದ್ದೀರಾ ಎಂಬುದಾಗಿ ಶ್ವೇತಭವನದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟ್ರಂಪ್, ‘‘ವ್ಯಾಪಾರ ಒಪ್ಪಂದದ ಬಗ್ಗೆ ಏನಾದರೂ ಮಾಡಬೇಕು ಎಂದು ನಾವು ನಿರ್ಧರಿಸಿದ್ದೇವೆ. ನೋಡುವ’’ ಎಂದರು.

‘‘ಸರಿಯಾದ ಒಪ್ಪಂದವೊಂದನ್ನು ರೂಪಿಸಲು ನಮಗೆ ಸಾಧ್ಯವಾದರೆ, ನಾವು ಸಹಿ ಹಾಕುತ್ತೇವೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News