ಬಂಗಾಳ ಕೊಲ್ಲಿಯಲ್ಲಿ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರ ದೋಣಿ ಮಗುಚಿ 15 ಸಾವು

Update: 2020-02-12 14:31 GMT
ಫೈಲ್ ಚಿತ್ರ

ಢಾಕಾ (ಬಾಂಗ್ಲಾದೇಶ), ಫೆ. 12: ಮಲೇಶ್ಯದತ್ತ ಪ್ರಯಾಣಿಸುತ್ತಿದ್ದ ರೊಹಿಂಗ್ಯಾ ನಿರಾಶ್ರಿತರ ದೋಣಿಯು ಮಂಗಳವಾರ ಬಂಗಾಳ ಕೊಲ್ಲಿಯಲ್ಲಿ ಮಗುಚಿದಾಗ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ ಹತ್ತಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಬಾಂಗ್ಲಾದೇಶದ ತಟರಕ್ಷಣಾ ಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

73 ಮಂದಿಯನ್ನು ಬಂಗಾಳ ಕೊಲ್ಲಿಯಿಂದ ರಕ್ಷಿಸಲಾಗಿದೆ. ಬಾಂಗ್ಲಾದೇಶದ ಕಾಕ್ಸ್‌ಬಝಾರ್ ಪಟ್ಟಣದ ಸಮೀಪವಿರುವ ಶಿಬಿರಗಳಿಂದ ನಿರಾಶ್ರಿತರು ಮಲೇಶ್ಯಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾಗ ದುರಂತ ಸಂಭವಿಸಿದೆ. ಸುಮಾರು 130 ಮಂದಿಯನ್ನು ಹೊತ್ತ ದೋಣಿಯು ಮಂಗಳವಾರ ಮುಂಜಾನೆ ಹೊರಟಿತ್ತು.

‘‘ಘಟನೆಯು ಅಮಾನವೀಯವಾಗಿದೆ. ದೋಣಿಯ ಸಾಮರ್ಥ್ಯವು 50 ಆಗಿದ್ದು, ಅದು ಸುಮಾರು 130 ಜನರನ್ನು ಒಯ್ಯುತ್ತಿತ್ತು’’ ಎಂದರು.

ಅದೇ ಸಮಯದಲ್ಲಿ ಅಷ್ಟೇ ಸಂಖ್ಯೆಯ ನಿರಾಶ್ರಿತರನ್ನು ಹೊತ್ತ ಇನ್ನೊಂದು ದೋಣಿಯೂ ಅಲ್ಲಿಂದ ತೆರಳಿದೆ ಎಂದು ಬದುಕುಳಿದವರು ಹೇಳಿದ್ದಾರೆ. ಆದರೆ, ಎರಡನೇ ದೋಣಿಯನ್ನು ಪತ್ತೆಹಚ್ಚಲು ಈವರೆಗೆ ತಟರಕ್ಷಣಾ ಪಡೆಗಳಿಗೆ ಸಾಧ್ಯವಾಗಿಲ್ಲ.

ಬಾಂಗ್ಲಾದೇಶದ ಎರಡು ನೌಕಾ ಹಡಗುಗಳು ಮತ್ತು ಎರಡು ತಟರಕ್ಷಣಾ ಹಡಗುಗಳು ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News