×
Ad

ಪ್ರಿಯತಮೆಯ ಜೊತೆ ಸೇರಿ ಕೊಲೆಯತ್ನ ಆರೋಪ: ಪತಿಯ ವಿರುದ್ಧ ಮನಪಾ ಹೆಲ್ತ್ ಇನ್‌ಸ್ಪೆಕ್ಟರ್ ದೂರು

Update: 2020-02-12 20:21 IST

ಮಂಗಳೂರು, ಫೆ.12: ಪ್ರಿಯತಮೆಯ ಜೊತೆ ಸೇರಿಕೊಂಡು ಪತಿ ಕಾರು ಢಿಕ್ಕಿ ಹೊಡೆಸಿಕೊಂಡು ತನ್ನ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕಿ ನಿರ್ಮಲಾ ಅವರು ಬರ್ಕೆ ಠಾಣೆಗೆ ದೂರು ನೀಡಿದ್ದಾರೆ.

ಫೆ.10ರಂದು ಮಧ್ಯಾಹ್ನ 2:25ರ ವೇಳೆಗೆ ತಾನು ಕರ್ತವ್ಯ ನಿಮಿತ್ತ ಸ್ಕೂಟಿಯಲ್ಲಿ ಕೋಡಿಯಾಲ್ ಬೈಲ್ ಸಮೀಪದ ದೀಪಾ ಕಂಫರ್ಟ್ ಬಳಿ ತೆರಳುತ್ತಿದ್ದಾಗ ಅದೇ ರಸ್ತೆಯಾಗಿ ಕಾರಿನಲ್ಲಿ ಬಂದ ಗಂಡ ಅತ್ತಾವರ ಕಾಪ್ರಿಗುಡ್ಡದ ಸೂರಜ್ ತನ್ನ ಸ್ಕೂಟಿಗೆ ಕಾರು ಢಿಕ್ಕಿ ಹೊಡೆದಿದ್ದಾರೆ. ಇದಕ್ಕೆ ಕಾರಿನಲ್ಲಿದ್ದ ಗಂಡನ ಪ್ರಿಯತಮೆ ಪೂರ್ಣಿಮಾಳ ಕುಮ್ಮಕ್ಕೇ ಕಾರಣವಾಗಿದೆ. ಅವರಿಬ್ಬರು ಕಾರಿನಲ್ಲಿರುವುದನ್ನು ನಾನು ನೋಡಿದಾಗ, ಪೂರ್ಣಿಮಾ ತನಗೆ ಅವಾಚ್ಯ ಶಬ್ದದಿಂದ ಬೈದು ತನ್ನ ಮೇಲೆ ಕಾರು ಚಲಾಯಿಸುವಂತೆ ಪ್ರೇರೇಪಿಸಿದ್ದಾಳೆ. ಅದರಂತೆ ಸೂರಜ್ ಕಾರನ್ನು ಸ್ಕೂಟಿಗೆ ಢಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾರೆ. ಇದರಿಂದ ತನಗೆ ಗಾಯವಾಗಿದೆ. ಅಲ್ಲದೆ ‘ನೀನು ಮಾಡುವುದು ಮಾಡು’ ಎಂದು ಪೂರ್ಣಿಮಾ ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ನಿರ್ಮಲಾ ದೂರಿನಲ್ಲಿ ತಿಳಿಸಿದ್ದಾರೆ.

ಸೂರಜ್ ಈ ಹಿಂದೆಯೂ ಹಲವು ಬಾರಿ ಪೂರ್ಣಿಮಾಳ ಕುಮ್ಮಕ್ಕಿನಿಂದ ಗಂಭೀರ ಸ್ವರೂಪದ ಹಲ್ಲೆ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ನಿರ್ಮಲಾ ದಾವೆ ಹೂಡಿದ್ದಾರೆ. ಇದೀಗ ಬರ್ಕೆ ಠಾಣೆಗೆ ಮತ್ತೊಂದು ದೂರು ನೀಡಿದ್ದಾರೆ. ಅದರಂತೆ ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News