ಸುಮಿತ್ ಮಿಶ್ರಾನ ಹಳೆ ದ್ವೇಷವೇ ಕೊಲೆಗೆ ಕಾರಣ: ಹೆಚ್ಚುವರಿ ಎಸ್ಪಿ

Update: 2020-02-12 15:00 GMT

ಹಿರಿಯಡ್ಕ, ಫೆ.12: ನವಿಮುಂಬೈಯ ಮಾಯಾ ಬಾರ್‌ನ ಮಾಲಕ ವಶಿಷ್ಠ ಸತ್ಯನಾರಾಯಣ ಯಾದವ್ (45) ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಐದು ದಿನ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಉಡುಪಿ ನ್ಯಾಯಾಲಯ ಇಂದು ಆದೇಶ ನೀಡಿದೆ.

ಫೆ.11ರಂದು ಬಂಧಿಸಲ್ಪಟ್ಟ ಆರೋಪಿಗಳಾದ ಸುಮಿತ್ ಮಿಶ್ರಾ, ಅಬ್ದುಲ್ ಶುಕೂರ್ ಯಾನೆ ಅದ್ದು, ಅವಿನಾಶ್ ಕರ್ಕೇರ, ಮೊಹಮ್ಮದ್ ಶರೀಫ್ ಅವರನ್ನು ಬೆಳಗ್ಗೆ ಉಡುಪಿಯ ಎರಡನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದು, ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಮನವಿಯಂತೆ ನ್ಯಾಯಾಧೀಶರಾದ ಲಾವಣ್ಯ, ಆರೋಪಿಗಳನ್ನು ಫೆ.17ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.

‘ವಶಿಷ್ಠ ಅವರ ಮಾಯ ಬಾರ್‌ನಲ್ಲಿ ಉದ್ಯೋಗಿಯಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಸುಮಿತ್ ಮಿಶ್ರಾ, ಮೂರು ತಿಂಗಳು ಹಿಂದೆ ವಶಿಷ್ಟ ರೊಂದಿಗೆ ಜಗಳ ಮಾಡಿ ಕೆಲಸ ಬಿಟ್ಟಿದ್ದನು. ಇದೇ ಹಳೆದ್ವೇಷದಲ್ಲಿ ಆತ, ಇತರೊಂದಿಗೆ ಸೇರಿ ಕೊಲೆ ಮಾಡಿರಬಹುದೆಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ’ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ತಿಳಿಸಿದ್ದಾರೆ.

ಶುಕೂರ್, ಅವಿನಾಶ್, ಶರೀಫ್ ಮುಂಬೈಯ ಬಾರ್‌ಗೆ ಹೋಗುತ್ತಿದ್ದು, ಈ ವೇಳೆ ಇವರಿಗೆ ಸುಮಿತ್ ಪರಿಚಯವಾಗಿದ್ದನು. ಅದೇ ರೀತಿ ಸುಮಿತ್ ಎಕೆಎಂಎಸ್ ಬಸ್ ಕಚೇರಿಗೆ ಬರುತ್ತಿದ್ದನು. ಹೀಗೆ ಇವರೆಲ್ಲ ಗೆಳೆಯರಾಗಿದ್ದರು. ಈ ಕೃತ್ಯದಲ್ಲಿ ಬೇರೆ ಯಾರು ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಮೃತರ ಪತ್ನಿಯ ಹೇಳಿಕೆಯನ್ನು ಕೂಡ ಪಡೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ವಶಿಷ್ಟನ ವಿರುದ್ಧ ಮುಂಬೈಯಲ್ಲಿ ಕೆಲವೊಂದು ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ದೊರೆತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ವಶಿಷ್ಟನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ತಂಗಿಯ ಸೀಮಂತ ಕಾರ್ಯಕ್ರಮಕ್ಕಾಗಿ ಅವಿನಾಶ್ ಕರ್ಕೇರ ಮನೆಗೆ ಹೋಗಲು ಮಣಿಪಾಲದಿಂದ ಬಾಡಿಗೆಗೆ ಪಡೆದ ಕಾರನ್ನೇ ಇವರು ಈ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಕಾರನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News