ಉಡುಪಿ ತಾಲೂಕಿನಲ್ಲಿ ಮನೆ ಬಾಗಿಲಿಗೆ ಪಿಂಚಣಿ
Update: 2020-02-12 20:46 IST
ಉಡುಪಿ, ಫೆ.12: ಜಿಲ್ಲೆಯಲ್ಲಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಿಸುವ ಕಾರ್ಯಕ್ರಮದ ಅಂಗವಾಗಿ, ಉಡುಪಿ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಅರ್ಹ ನಾಗರಿಕರ ಮನೆ ಬಾಗಿಲಿಗೆ ತೆರಳಿ ವಿವಿಧ ಪಿಂಚಣಿ ವಿತರಿಸುತಿದ್ದಾರೆ.
ಬುಧವಾರ ಉಡುಪಿಯ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಹೆಚ್.ಎನ್.ವಿಶ್ವನಾಥ್, ಗ್ರಾಮ ಲೆಕ್ಕಿಗರಾದ ಕರಿಯಮ್ಮ ಹಾಗೂ ಗ್ರಾಮ ಸಹಾಯಕರು ಯೋಜನೆಗೆ ಅರ್ಹರಾದ ಸಾರ್ವಜನಿಕರ ಮನೆಗಳಿಗೆ ತೆರಳಿ ಅರ್ಜಿ ಪಡೆದು, ಸ್ಥಳದಲ್ಲೇ ಮಂಜೂರಾತಿ ಪತ್ರವನ್ನು ನೀಡಿದರು.
ಈಗಾಗಲೇ ಜಿಲ್ಲೆಯ ಕೋಟ ಹೋಬಳಿ ಹಾಗೂ ಬ್ರಹ್ಮಾವರ ಹೋಬಳಿಗಳಲ್ಲೂ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೊರಯ್ಯ ಅವರ ಮಾರ್ಗ ದರ್ಶನದಂತೆ ಕಂದಾಯ ನಿರೀಕ್ಷಕರು ಗ್ರಾಮಗಳಿಗೆ ತೆರಳಿ ಅಲ್ಲಿನ ಫಲಾನುಭವಿಗಳ ಮನೆಗೆ ಬಾಗಿಲಿಗೆ ತೆರಳಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನಗಳ ಮಂಜೂರಾತಿ ಪತ್ರಗಳನ್ನು ವಿತರಿಸುತಿದ್ದಾರೆ.