3 ಸಾಮಾನ್ಯ ವಿಮೆ ಕಂಪನಿಗಳಿಗೆ 2,500 ಕೋ.ರೂ. : ಮರುಬಂಡವಾಳೀಕರಣಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ

Update: 2020-02-12 16:00 GMT

ಹೊಸದಿಲ್ಲಿ,ಫೆ.12: ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿರುವ ಸಾರ್ವಜನಿಕ ಕ್ಷೇತ್ರದ ಸಾಮಾನ್ಯ ವಿಮೆ ಕಂಪನಿಗಳಾದ ನ್ಯಾಷನಲ್ ಇನ್ಶೂರನ್ಸ್ ಕಂಪನಿ,ಓರಿಯಂಟಲ್ ಇನ್ಶೂರನ್ಸ್ ಕಂಪನಿ ಮತ್ತು ಯುನೈಟೆಡ್ ಜನರಲ್ ಇನ್ಶೂರನ್ಸ್ ಕಂಪನಿಗೆ 2,500 ಕೋ.ರೂ.ಗಳ ಮರು ಬಂಡವಾಳವನ್ನು ಒದಗಿಸಲು ಸರಕಾರವು ನಿರ್ಧರಿಸಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರಕಾರವು ಮುಂದಕ್ಕೆ ಅಗತ್ಯವಾದರೆ ಇನ್ನಷ್ಟು ಬಂಡವಾಳವನ್ನು ಈ ಕಂಪನಿಗಳಿಗೆ ಒದಗಿಸಲಿದೆ ಎಂದ ಅವರು,ಕಳೆದ ಮೂರು ವರ್ಷಗಳಲ್ಲಿ ಸರಕಾರವು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಮೂರು ಲ.ಕೋ.ರೂಗಳ ಮರುಬಂಡವಾಳವನ್ನು ಒದಗಿಸಿದೆ. ಇದೇ ರೀತಿ ಸಾಮಾನ್ಯ ವಿಮೆ ಕಂಪನಿಗಳಿಗೂ ಹಂತ ಹಂತವಾಗಿ ಮರು ಬಂಡವಾಳವನ್ನು ಒದಗಿಸಲಾಗುವುದು ಎಂದರು.

ಮಾರ್ಚ್ ಅಂತ್ಯದಲ್ಲಿ ಈ ವಿಮೆ ಕಂಪನಿಗಳ ಉದ್ದೇಶಿತ ವಿಲೀನಕ್ಕೆ ಮುನ್ನ ಸರಕಾರದ ಈ ಪ್ರಕಟಣೆ ಹೊರಬಿದ್ದಿದೆ. ವಿಲೀನದ ಬಳಿಕ ಈ ಕಂಪನಿಗಳ ಲಾಭ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

ತೆರಿಗೆದಾರರಿಗೆ ಬಡ್ಡಿ ಮತ್ತು ದಂಡದ ಹೊರೆಯಿಲ್ಲದೆ ಬಾಕಿ ಇರುವ ತೆರಿಗೆಗಳನ್ನು ಪಾವತಿಸಲು ಅವಕಾಶವನನು ಒದಗಿಸುವ ‘ವಿವಾದ್ ಸೆ ವಿಶ್ವಾಸ್’ಯೋಜನೆ ಕುರಿತಂತೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಎಲ್ಲ ಪಾಲುದಾರರೊಂದಿಗೆ ಸಭೆಯನ್ನು ನಡೆಸಿದ್ದು, ಯೋಜನೆಗೆ ತಿದ್ದುಪಡಿಗಳನ್ನು ತರಲು ಸರಕಾರವು ನಿರ್ಧರಿಸಿದೆ ಎಂದೂ ಜಾವಡೇಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News