ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವಿವಿಧ ವೇಷ: ಮಾನವೀಯ ಸೇವೆಯ ವಿಕ್ಕಿ ಶೆಟ್ಟಿ

Update: 2020-02-12 16:57 GMT
ವಿಕ್ಕಿ ಶೆಟ್ಟಿ

ಮೂಡುಬಿದಿರೆ: ತನ್ನ ದುಡಿಮೆಯಿಂದ ದುರ್ಬಲರಿಗೆ ಅಥವಾ ಅನಾರೋಗ್ಯ ಪೀಡಿತರಿಗೆ ಉನ್ನತ ಮಟ್ಟದಲ್ಲಿ ನೆರವಾಗಲು ಅಸಾಧ್ಯವೆಂದು ಯುವಕನೋರ್ವ ಜನ ಸಂದಣಿ ಇರುವ ಕಾರ್ಯಕ್ರಮಗಳಲ್ಲಿ ವಿವಿಧ ತೆರನಾದ ಭಾರವಾದ, ವಿಶೇಷವೆನಿಸುವ ಮುಖವಾಡದ ಬಣ್ಣದ ವೇಷ ಧರಿಸಿ ಹಣವನ್ನು ಸಂಗ್ರಹಿಸಿ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ವಿಕ್ಕಿ ಶೆಟ್ಟಿ ಎಂದೇ ಚಿರಪರಿಚಿತರಾಗಿರುವ ವಿಕಾಸ್ ಶೆಟ್ಟಿ ಮಾನವೀಯತೆ ಮೆರೆದ ಯುವಕ.

ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಬಳಿಯ ನಿವಾಸಿ, ಬಡ ಕುಟುಂಬದ ಭಾಸ್ಕರ ಶೆಟ್ಟಿ-ಶಶಿಕಲಾ ದಂಪತಿಯ ಪುತ್ರನಾಗಿರುವ ವಿಕ್ಕಿ ಶೆಟ್ಟಿ ಬೆದ್ರ ಅವರು ಮೆಕ್ಯಾನಿಕ್ ವೃತ್ತಿಯನ್ನು ಮಾಡುತ್ತಿದ್ದು ಸಾಮಾಜಿಕ ಕಳಕಳಿ ಹಾಗೂ ಮಾನವೀಯತೆಯನ್ನು ಮೈಗೂಡಿಸಿಕೊಂಡು ಕಳೆದ ಮೂರು ವರ್ಷಗಳಲ್ಲಿ ಮೂವರು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಸಹಾಯ ನೀಡಿದ್ದಾರೆ.

ಸಹಾಯ ಹಸ್ತದ ಮಹಾಪೂರ

2018ರಲ್ಲಿ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ವಿಚಿತ್ರ ರೀತಿಯ ವೇಷ ಧರಿಸಿ 1ಲಕ್ಷವನ್ನು ಸಂಗ್ರಹಿಸಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಿರ್ತಾಡಿಯ ಸಾನ್ವಿ ಎಂಬ 4ರ ಹರೆಯದ ಮಗುವಿನ ಚಿಕಿತ್ಸೆಗೆ ಮೊದಲ ಬಾರಿಗೆ ನೆರವಾಗಿದ್ದಾರೆ.

ಗಂಟಾಲ್‍ಕಟ್ಟೆಯ 9ರ ಹರೆಯದ ಭವಿತ್ ಎಂಬ ಬಾಲಕ ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಂದರ್ಭ ಬಾಲಕನ ಚಿಕಿತ್ಸೆಗಾಗಿ 2019ರಲ್ಲಿ  ಮೂಡುಬಿದಿರೆಯಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಸಂದರ್ಭ ವೇಷ ಧರಿಸಿ ರಾತ್ರಿ-ಹಗಲು ಸುಮಾರು84,000 ರೂ. ಸಂಗ್ರಹಿಸಿ ನೆರವಾಗಿದ್ದಾರೆ. ಇತ್ತೀಚೆಗೆ ಕಟೀಲಿನಲ್ಲಿ ನಡೆದ ಬ್ರಹ್ಮಕಲಶದ ಸಂದರ್ಭ ಸುಮಾರು 3ಲಕ್ಷ ರೂ. ಸಂಗ್ರಹಿಸಿ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಉಡುಪಿಯ 5 ವರ್ಷದ ಮಗು ನಿಹಾರಿಕಳ ಚಿಕಿತ್ಸೆಗೆ ಸಹಾಯ ನೀಡುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. 

ಸೇವಾ ಮನೋಭಾವ ಹೊಂದಿರುವ ವಿಕ್ಕಿ ಶೆಟ್ಟಿ ಮೂಡುಬಿದಿರೆಯಲ್ಲಿ ವಾರ-ವಾರ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿರುವ ನೇತಾಜಿ ಬ್ರಿಗೇಡಿನ ಸದಸ್ಯ. ಮೊದ ಮೊದಲು ವೇಷ ಧರಿಸಿ ಹಣ ಸಂಗ್ರಹಣೆ ಮಾಡುವಾಗ ಮನೆಯಲ್ಲಿ ವಿರೋಧವಿತ್ತು. ಆದರೆ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಿರುವುದನ್ನು ಗಮನಿಸಿದ ಹೆತ್ತವರೂ ಈಗ ಸಹಕಾರ ನೀಡುತ್ತಿದ್ದಾರೆ, ಅವರ ಸಮಾಜ ಸೇವೆಗೆ ಸಾಥ್ ನೀಡಿದ್ದಾರೆ. ಬಡ ಕುಟುಂಬದ ಅನಾರೋಗ್ಯ ಪೀಡಿತ ಮಕ್ಕಳನ್ನು ಕಂಡರೆ ಅವರ ಚಿಕಿತ್ಸೆಗೆ ತನ್ನಿಂದೇನಾದರು ಸಹಾಯ ಮಾಡಬೇಕೆನ್ನುವ ಹಂಬಲ ನನ್ನಲ್ಲಿದೆ. ಅನಾರೋಗ್ಯ ಪೀಡಿತ ಮಕ್ಕಳ ಬಗ್ಗೆ ಯಾರಾದರೂ ವಾಟ್ಸ್ ಆ್ಯಪ್ ನಲ್ಲಿ ಏನಾದರೂ ಮೆಸೇಜ್ ಹಾಕಿದಾಗ ತನ್ನ ಮನಸ್ಸು ಕರಗುತ್ತದೆ. ಇಂತಹ ಮಕ್ಕಳಿಗೆ ತಾನು ಸಹಾಯ ಮಾಡಬೇಕೆನ್ನುವ ಮನೋಭಾವ ಮೂಡುತ್ತದೆ. ತಾನು ಬಡ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿರುವುದರ ಬಗ್ಗೆ ನನಗೆ ಸಂತೋಷವಿದೆ. ಈ ಹಿಂದೆ ವೇಷ ಹಾಕಿ ಹಲವಾರು ಅಸಹಾಯಕ ಜನರಿಗೆ ನೆರವಾಗಿರುವ ರವಿ ಕಟಪಾಡಿಯವರೇ ನನಗೆ ಪ್ರೇರಣೆ ಎಂದು ವಿಕ್ಕಿ ಶೆಟ್ಟಿ ಬೆದ್ರ ತಿಳಿಸಿದ್ದಾರೆ.

Writer - ದೀವಿತ್ ಎಸ್.ಕೆ. ಪೆರಾಡಿ

contributor

Editor - ದೀವಿತ್ ಎಸ್.ಕೆ. ಪೆರಾಡಿ

contributor

Similar News