×
Ad

ರೈತರ ಸಾಲ ಮನ್ನಾ ಬಾಕಿ ಶೀಘ್ರ ಮಂಜೂರು: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2020-02-12 23:18 IST

ಮಂಗಳೂರು, ಫೆ.12:ದ.ಕ.ಜಿಲ್ಲೆಯಲ್ಲಿ ತಾಂತ್ರಿಕ ದೋಷದಿಂದಾಗಿ ಸಾಲಮನ್ನಾ ಮಂಜೂರಾಗದ ರೈತರಿಗೆ ಶೀಘ್ರ ಮಂಜೂರು ಮಾಡಲಾಗು ವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತ ಮುಖಂಡರೊಂದಿಗೆ ಬುಧವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ 6,855 ರೈತರಿಗೆ ಸಾಲಮನ್ನಾ ಸೌಲಭ್ಯವು ಅವರ ಬ್ಯಾಂಕ್ ಖಾತೆಯ ಸಮಸ್ಯೆಯಿಂದಾಗಿ ಸಿಗಲಿಲ್ಲ. ಈ ನಿಟ್ಟಿನಲ್ಲಿ ಮುಂದಿನ 15 ದಿನದೊಳಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ರೈತರು ಸಾಲ ಸುಸ್ಥಿದಾರರಾಗಿದ್ದರೆ ಅವರನ್ನು ಅವಮಾನಗೊಳಿಸುವ ಯಾವುದೇ ಕಾರ್ಯವನ್ನು ಬ್ಯಾಂಕ್‌ನವರು ಮಾಡಬಾರದು. ಬ್ಯಾಂಕ್‌ಗಳಿಗೆ ಕನ್ನಡ ಬಲ್ಲ ಅಧಿಕಾರಿಗಳನ್ನು ನೇಮಿಸಬೇಕು. ಹೊರರಾಜ್ಯದ ಬ್ಯಾಂಕ್ ಅಧಿಕಾರಿಗಳು ಸ್ಥಳೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯುವಂತೆ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲಮನ್ನಾ ಯೋಜನೆಗೆ 3,156 ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ.ಅವರಿಗೆ 16.85 ಕೋ.ರೂ. ಸಾಲ ಮನ್ನಾ ಆಗಲಿದ್ದು, ಈ ಪೈಕಿ 2,841 ರೈತರಿಗೆ ಸುಮಾರು 14.35 ಕೋ.ರೂ. ಬಂದಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಒ ಸೆಲ್ವಮಣಿ ಆರ್, ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News