ಶಾಲಾ ಪರಿಸರದಲ್ಲಿ ಚರಂಡಿ: ವಿದ್ಯಾರ್ಥಿ, ಪಾಲಕರಿಂದ ಪ್ರತಿಭಟನೆ

Update: 2020-02-12 18:03 GMT

ಭಟ್ಕಳ: ಶಾಲಾ ಪರಿಸರದಲ್ಲಿದ್ದ ಚರಂಡಿಯಿಂದಾಗಿ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದು ಅದನ್ನು ದುರಸ್ತಿಗೊಳಿಸುವವರೆಗೂ ತರಗತಿಯನ್ನು ಬಹಿಷ್ಕರಿಸುವುದಾಗಿ ಪಾಲಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಕ್ಲಷ್ಟರ್ ವ್ಯಾಪ್ತಿಯ ಕೆರೆಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನಡೆದಿದೆ.

ಶಾಲೆಯ ಪಕ್ಕದಲ್ಲೇ ತೆರೆದ ಚರಂಡಿ ಇದ್ದು ಇದರಿಂದಾಗಿ ವಿದ್ಯಾರ್ಥಿಗಳು ಅನೇಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇಲ್ಲಿಯೆ ಬಿಸಿಯೂಟ ಸೇವನೆ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳಿಂದ ಗ್ರಾ.ಪಂ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಂಗಳವಾರ ಶಾಲೆಗೆ ಬಂದ ವಿದ್ಯಾರ್ಥಿಗಳು ತಮ್ಮ ಪಾಲರೊಂದಿಗೆ ಸೇರಿ ಪ್ರತಿಭಟನೆ ನಡೆಸಿದ್ದಾರೆ.

ಸುದ್ದಿ ತಿಳಿದ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ವಿದ್ಯಾರ್ಥಿ ಹಾಗೂ ಪಾಲಕರನ್ನು ಮನವೊಲಿಸಲು ಪ್ರಯತ್ನಿಸಿದಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎನ್ನಲಾಗಿದ್ದು ಪಾಲಕರು ವಿದ್ಯಾರ್ಥಿಗಳೊಂದಿಗೆ ಸೇರಿ ಪ್ರಧಾನ ಗೇಟಿಗೆ ಬೀಗ ಜಡಿದರು ಎಂದು ತಿಳಿದುಬಂದಿದೆ.

ಸರ್ಕಾರಿ ಶಾಲೆಗಳ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಮಲತಾಯಿ ದೋರಣೆ ತಾಳುತ್ತಿದ್ದು ರಾಜಕಾರಣಿಗಳ, ಅಧಿಕಾರಿಗಳ ಹಾಗೂ ಉಳ್ಳವರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದು ಬಡವರು ಸರ್ಕಾರಿ ಶಾಲೆಯನ್ನೇ ಅವಲಂಬಿಸುತ್ತಾರೆ. ಇದರಿಂದಾಗಿಯೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಮನೋಭಾವನೆ ತೋರುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ. 

ಪಂಚಾಯತ್ ಅಧಿಕಾರಿ ತರಾಟೆಗೆ: ಪ್ರತಿಭಟನಾ ನಿರತ ಪಾಲಕರ ಮನವೊಲಿಸಲು ಬಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಪ್ರತಿಭಟನಕಾರರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದ್ದು, ಶಾಲಾ ಪರಿಸರದಲ್ಲಿ ಕೆಲ ಸಮಯ ಗೊಂದಲದ ವಾತವರಣ ನಿರ್ಮಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಂತರ ತಾಲೂಕು ಪಂಚಾಯತ್ ಕಾರ್ಯನಿರ್ವಾಣಾಧಿಕಾರಿ ಪ್ರಭಾಕರ್ ಚಿಕ್ಕನಮನೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಮಹೇಶ್ ನಾಯ್ಕ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಮುರುಡೇಶ್ವರ ಮುಖ್ಯ ರಸ್ತೆ ಕಾಮಾಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಪಕ್ಕದ ಚರಂಡಿ ತೆರೆದು ಕೊಂಡಿದೆ 2-3ದಿನಗಳೊಳಗೆ ಅದನ್ನು ಸರಿಪಡಿಸುವ ವೆವಸ್ಥೆ ಮಾಡುವುದಾಗಿ ಹೆದ್ದಾರಿ ಅಭಿಯಂತರ ಮಹೇಶ ನಾಯ್ಕ ಭರವಸೆ ನೀಡಿದ ನಂತರ ಪ್ರತಿಭಟನಾ ನಿರತ ವಿದ್ಯಾರ್ಥಿ ಹಾಗೂ ಪಾಲಕರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News