ಮಂಗಳೂರು ಗೋಲಿಬಾರ್ ಪ್ರಕರಣ: 50 ವೀಡಿಯೊಗಳ ಪೆನ್ ಡ್ರೈವ್ ಹಾಜರುಪಡಿಸಿದ ಪೊಲೀಸರು
ಮಂಗಳೂರು, ಫೆ.13: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2019ರ ಡಿ.19ರಂದು ನಡೆದ ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿನಿವಿಧಾನಸೌಧದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸಾಕ್ಷಿಗಳ ವಿಚಾರಣೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತನಿಖಾಧಿಕಾರಿ ಜಗದೀಶ್, ಮ್ಯಾಜಿಸ್ಟೀರಿಯಲ್ ನ್ಯಾಯಾಲಯಕ್ಕೆ ಇದುವರೆಗೆ ಒಟ್ಟು 203 ಮಂದಿ ಸಾಕ್ಷಿ ನುಡಿದಿದ್ದಾರೆ. ಈ ಮೊದಲು 201 ಮಂದಿ ಸಾಕ್ಷಿ ಹಾಜರುಪಡಿಸಿದ್ದರು. ಗುರುವಾರ ಇಬ್ಬರು ಸಾಕ್ಷಿ ನುಡಿದಿದ್ದಾರೆ. ಅಲ್ಲದೆ, ಈ ಮೊದಲೇ ಸಾಕ್ಷಿ ನೀಡಿದ್ದ ವ್ಯಕ್ತಿಯೋರ್ವ ಮೊಬೈಲ್ ರೆಕಾರ್ಡಿಂಗ್‌ನ್ನು ಹಾಜರುಪಡಿಸಿದ್ದಾರೆ ಎಂದರು.
ಘಟನಾವಳಿಯ ವೀಡಿಯೊಗಳನ್ನು ಹಾಜರುಪಡಿಸಲು ಮಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿತ್ತು. 50 ತುಣುಕುಗಳು ಇವೆ ಎನ್ನಲಾದ ಪೆನ್ ಡ್ರೈವ್ ನ್ನು ಹಾಜರುಪಡಿಸಿದ್ದಾರೆ. ಸುಮಾರು 20 ಡಿವಿಆರ್‌ನ್ನು ತನಿಖಾ ಉದ್ದೇಶದಿಂದ ಪೊಲೀಸ್ ವಶಕ್ಕೆ ಪಡೆದು ನ್ಯಾಯಾಲಯದ ವಶಕ್ಕೆ ನೀಡಿದ್ದರು. ಅದರ ಸ್ವೀಕೃತಿಯನ್ನು ಎಸಿಪಿ ಹಾಗೂ ಪೊಲೀಸ್ ನೋಡಲ್ ಅಧಿಕಾರಿ ಬೆಳ್ಳಿಯಪ್ಪ ಹಾಜರುಪಡಿಸಿದ್ದಾರೆ.
‘ಹಿಂದಿನ ವಿಚಾರಣೆಯಲ್ಲಿ ತಡವಾಗಿ ಬಂದಿದ್ದ ಇಬ್ಬರು ಸಾಕ್ಷಿಗಳನ್ನು ಗುರುವಾರ ವಿಚಾರಣೆ ನಡೆಸಲಾಗಿದೆ. ಹಾಜರಾದ ಇಬ್ಬರೂ ಲಿಖಿತ ಸಾಕ್ಷಿ ಒದಗಿಸಿದ್ದಾರೆ. ಜತೆಗೆ, ಉಚ್ಚ ನ್ಯಾಯಾಲಯದ ಸೂಚನೆಯಂತೆ ವೀಡಿಯೊ ತುಣುಕು, ಸಿಸಿಟಿವಿ ಫೂಟೇಜ್‌ಗಳನ್ನು ಹಾಜರುಪಡಿಸಲು ಸಾರ್ವಜನಿಕರು, ಮಾಧ್ಯಮ, ಪೊಲೀಸರಿಗೆ ಆಹ್ವಾನಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಓರ್ವ ವ್ಯಕ್ತಿ ಮಾತ್ರ ಮೊಬೈಲ್ ರೆಕಾರ್ಡಿಂಗ್‌ನ ತುಣುಕನ್ನು ಹಾಜರುಪಡಿಸಿದ್ದಾರೆ. ಉಳಿದಂತೆ ಯಾವುದೇ ಸಾರ್ವಜನಿಕರು ಬಂದಿಲ್ಲ ಎಂದು ತನಿಖಾಧಿಕಾರಿ ತಿಳಿಸಿದರು.
ಫೆ.24ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಇಲ್ಲಿಯವರೆಗಿನ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಪೂರ್ಣ ವರದಿ ಸಲ್ಲಿಸಲು ಮೂರು ತಿಂಗಳ ಅವಕಾಶವಿದೆ. ಪೊಲೀಸ್ ಇಲಾಖೆಯವರನ್ನು ಇಲ್ಲಿಯವರೆಗೆ ವಿಚಾರಣೆ ಮಾಡಿಲ್ಲ. ಇನ್ನು ವಿಸ್ತಾರವಾದ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲ ಪೂರ್ಣಗೊಂಡ ಬಳಿಕವೇ ವರದಿ ಸಲ್ಲಿಸಲಾಗುವುದು ಎಂದು ತನಿಖಾಧಿಕಾರಿ ಜಗದೀಶ್ ಮಾಹಿತಿ ನೀಡಿದರು.
ಫೆ.19ಕ್ಕೆ ವಿಚಾರಣೆ ಮುಂದೂಡಿಕೆ
ಮಂಗಳೂರು ಮಿನಿವಿಧಾನಸೌಧ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗುರುವಾರ ಇಬ್ಬರ ಸಾಕ್ಷಿಗಳನ್ನು ಹಾಜರುಪಡಿಸಿದ್ದಾರೆ. ಓರ್ವ ವೀಡಿಯೊ ತುಣುಕು ನೀಡಿದ್ದಾರೆ. ಕರ್ನಾಟಕ ಬಂದ್ ಇರುವುದರಿಂದ ಹಾಗೂ ಸಾರ್ವಜನಿಕರಿಗೆ ಅನಾನುಕೂಲ ಆಗದಿರಲೆಂದು ಫೆ.19ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಅಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿಚಾರಣೆ ನಡೆಯಲಿದೆ ಎಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಗದೀಶ್ ಹೇಳಿದರು.
ಆಸಕ್ತರಿಗೆ ಇನ್ನೊಂದು ಅವಕಾಶ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿನ ವೀಡಿಯೊಗಳನ್ನು ಪರಿಗಣಿಸುವುದಿಲ್ಲ. ಸ್ವತಃ ಅವರೇ ವೀಡಿಯೊ ಮಾಡಿರಬೇಕು ಅಥವಾ ಮನೆಯಲ್ಲಿನ ಸಿಸಿಟಿವಿಯ ಡಿವಿಆರ್‌ಗಳನ್ನು ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದರು.