'ಪ್ರತಿಯೊಬ್ಬ ಭಾರತೀಯನಿಗೆ ಹಿಂದಿ ತಿಳಿದಿರಬೇಕು': ಕ್ರಿಕೆಟ್ ವೀಕ್ಷಕ ವಿವರಣೆಗಾರನ ಹೇಳಿಕೆ ವಿರುದ್ಧ ಆಕ್ರೋಶ

Update: 2020-02-13 11:50 GMT

ಬೆಂಗಳೂರು: ಕರ್ನಾಟಕ ಮತ್ತು ಬರೋಡಾ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಾಟದ ವೇಳೆ ವೀಕ್ಷಕ ವಿವರಣೆಗಾರರೊಬ್ಬರು "ಹಿಂದಿ ನಮ್ಮ ಮಾತೃ ಭಾಷೆಯಾಗಿರುವುದರಿಂದ ಪ್ರತಿಯೊಬ್ಬ ಭಾರತೀಯನಿಗೆ ಹಿಂದಿ ತಿಳಿದಿರಬೇಕು'' ಎಂದು ಹೇಳಿರುವುದು ವಿವಾದಕ್ಕೀಡಾಗಿದೆ.

ಬರೋಡಾ ತಂಡದ ಎರಡನೇ ಇನ್ನಿಂಗ್ಸ್‍ ನ ಏಳನೇ ಓವರ್ ವೇಳೆ ವೀಕ್ಷಕ ವಿವರಣಕಾರರಿಬ್ಬರ ಪೈಕಿ ಒಬ್ಬರು, "ಸುನಿಲ್ ಗಾವಸ್ಕರ್ ಅವರು ಹಿಂದಿಯಲ್ಲಿ ವೀಕ್ಷಕ ವಿವರಣೆ ನೀಡಿ ಅದೇ ಭಾಷೆಯಲ್ಲಿ ತಮ್ಮ ಅಮೂಲ್ಯ ಸಲಹೆ ನೀಡುತ್ತಿರುವುದು ನನಗೆ ಖುಷಿ ನೀಡಿದೆ. ಅವರು ಡಾಟ್ ಬಾಲ್ ಅನ್ನು `ಬಿಂದಿ' ಬಾಲ್ ಎಂದು ಹೇಳಿರುವುದು ಕೂಡ ನನಗೆ ಖುಷಿ ನೀಡಿದೆ" ಎಂದರು.

ಇದಕ್ಕೆ ಇನ್ನೊಬ್ಬ ವೀಕ್ಷಕ ವಿವರಣೆಗಾರ ಸುಶೀಲ್ ದೋಷಿ, ``ಪ್ರತಿಯೊಬ್ಬ ಭಾರತೀಯನಿಗೆ ಹಿಂದಿ ತಿಳಿದಿರಬೇಕು, ಅದು ನಮ್ಮ ಮಾತೃ ಭಾಷೆ, ಅದಕ್ಕಿಂತ ದೊಡ್ಡ ಭಾಷೆ ಬೇರೊಂದಿಲ್ಲ'' ಎಂದರು. ಅಷ್ಟೇ ಅಲ್ಲದೆ ``ನಾವು ಕ್ರಿಕೆಟಿಗರಾಗಿದ್ದುಕೊಂಡು ಹಿಂದಿ ಮಾತನಾಡುತ್ತಿದ್ದೇವೇಕೆ ಎಂದು ಕೇಳುವ ಜನರನ್ನು ನೋಡಿದಾಗ ಸಿಟ್ಟು ಬರುತ್ತದೆ. ನೀವು ಭಾರತದಲ್ಲಿ ವಾಸಿಸುತ್ತಿರುವಾಗ ಸಹಜವಾಗಿ ಮಾತೃ ಭಾಷೆಯಲ್ಲಿ ಮಾತನಾಡುತ್ತೀರಿ'' ಎಂದೂ ಅವರು ಹೇಳಿದರು.

ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿ ಹಲವರು ವೀಕ್ಷಕ ವಿವರಣೆಗಾರರ ಧೋರಣೆಯನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ ಪಂದ್ಯವಾಡುತ್ತಿದ್ದ ಎರಡು ತಂಡಗಳ ಮಾತೃ ಭಾಷೆ ಕನ್ನಡ ಹಾಗೂ ಗುಜರಾತಿ ಆಗಿತ್ತು.

ವೀಕ್ಷಕ ವಿವರಣೆಗಾರರ ಈ ಹೇಳಿಕೆಗೆ ಕೆಲವರು ಬಿಸಿಸಿಐಯನ್ನು ದೂಷಿಸಿದರೆ ಇನ್ನು ಕೆಲವರು ಅವರನ್ನು ಕಿತ್ತು ಹಾಕಬೇಕೆಂದು ಆಗ್ರಹಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News