ಮಾರ್ಚ್ 1: ತಣ್ಣೀರುಬಾವಿ ಟ್ರೀಪಾರ್ಕ್‌ನಲ್ಲಿ ಪರಿಸರ ಸಮ್ಮೇಳನ

Update: 2020-02-13 14:48 GMT

ಮಂಗಳೂರು, ಫೆ.13: ಪರಿಸರ ಸಂರಕ್ಷಣೆ, ಶುದ್ಧ ಗಾಳಿ, ನೀರು, ಆಹಾರ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಅದರ ಈಡೇರಿಕೆಗೆ ಸರಕಾರದ ಗಮನ ಸೆಳೆಯುವ ಸಲುವಾಹಿ 2ನೇ ರಾಜ್ಯ ಮಟ್ಟದ ಪರಿಸರ ಸಮ್ಮೇಳನವು ಮಾ.1ರಂದು ನಗರದ ಹೊರವಲಯದ ತಣ್ಣೀರುಬಾವಿಯಲ್ಲಿರುವ ಟ್ರೀ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್)ದ ಮುಖಂಂಡ ಶಶಿಧರ ಶೆಟ್ಟಿ ತಿಳಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೊದಲ ಸಮ್ಮೇಳನ 2014ರಲ್ಲಿ ನಡೆದಿದೆ. ಪ್ರಸ್ತುತ ಸಮ್ಮೇಳನದಲ್ಲಿ ಪರಿಸರ ಉಳಿವಿನ ದೃಷ್ಟಿಯಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಸುಮಾರು 8 ಸಾವಿರ ಪರಿಸರ ಪ್ರೇಮಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಕೋರ್ಟ್ ಮಾದರಿ ಸಮ್ಮೇಳನ: ಪರಿಸರಕ್ಕಾಗಿ ಮುಡಿಪಾಗಿಟ್ಟ ಪದ್ಮಶ್ರೀ ಸುಕ್ರಿಬೊಮ್ಮ ಗೌಡ, ಪದ್ಮಶ್ರೀ ತುಳಸಿ ಗೌಡ, ಸಿದ್ದಿ ಸಮುದಾಯದ ಹೋರಾಟಗಾರ ಡಿಯಾಗೋ ಬಸ್ತ್ಯವ್ ಸಿದ್ದಿ, ಪಾಡ್ದನ ಹಾಡುಗಾರ್ತಿ ಕುತ್ತಾರ್ ತಿಮ್ಮಕ್ಕ, ಸಾಮಾಜಿಕ ಹೋರಾಟಗಾರ ರವೀಂದ್ರನಾಥ ಶ್ಯಾನುಭಾಗ್ ಸ್ಟಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನವು ಕೋರ್ಟ್ ಮಾದರಿಯಲ್ಲಿ ನಡೆಯಲಿದೆ. 10 ಮಂದಿ ವಕೀಲರು ಭಾಗವಹಿಸಲಿದ್ದಾರೆ. ರವೀಂದ್ರನಾಥ್ ಶ್ಯಾನುಭಾಗ್ ನ್ಯಾಯಾಧೀಶರ ಸ್ಥಾನದಲ್ಲಿರುತ್ತಾರೆ. ಪರಿಸರಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಪ್ರತಿನಿಧಿಯಾಗಿ ಅಧಿಕಾರಿಗಳನ್ನು ಕಳುಹಿಸಲು ಮನವಿ ಮಾಡಲಾಗಿದೆ. ಪರಿಸರ ಉಳಿಸಲು ಈಗಿರುವ ಕಾನೂನುಗಳ ಕಟ್ಟುನಿಟ್ಟು ಪಾಲನೆ, ಅಗತ್ಯವಾಗಿರುವ ತಿದ್ದುಪಡಿಗಳ ಕುರಿತಾಗಿ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗುವುದು. ಇದನ್ನು ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಶಶಿಧರ ಶೆಟ್ಟಿ ಹೇಳಿದರು.

ಬುಡಕಟ್ಟು ಜನಾಂಗಗಳ ಭೂಮಿ ಹಕ್ಕು, ಎಂಡೋಪೀಡಿತರ ಬಗ್ಗೆ ಚರ್ಚೆ, ನೀರಾವರಿ ವ್ಯವಸ್ಥೆ ಕುರಿತು ಬಯಲುಸೀಮೆಯ ಹೋರಾಟಗಾರರು ಅಹವಾಲು ಮಂಡಿಸಲಿದ್ದಾರೆ. ಅರಣ್ಯ ಇಲಾಖೆಯ ಕುಂದುಕೊರತೆ, ಅಗತ್ಯವಿರುವ ಅಭಿವೃದ್ಧಿ ಕಾರ್ಯಯೋಜನೆ ಕುರಿತು ಅರಣ್ಯಾಧಿಕಾರಿಗಳು ಮಾತನಾಡಲಿದ್ದಾರೆ. ಪಶ್ಚಿಮ ಘಟ್ಟ ರಕ್ಷಣೆ ಬಗ್ಗೆಯೂ ಚರ್ಚೆ ನಡೆಯಲಿದೆ. ರಾಜಕೀಯ, ಧಾರ್ಮಿಕ ವಿಚಾರಗಳೆಲ್ಲವನ್ನೂ ಮೀರಿ ಕೇವಲ ಪರಿಸರ ಕುರಿತಾಗಿ ಈ ಸಮ್ಮೇಳನ ನಡೆಯಲಿದೆ ಎಂದು ಶಶಿಧರ ಶೆಟ್ಟಿ ಹೇಳಿದರು.

ಶಾಸಕರು, ಅಧಿಕಾರಿಗಳಿಗೆ ಆಮಂತ್ರಣ

ಪರಿಸರ ಸಮ್ಮೇಳನಕ್ಕೆ ರಾಜ್ಯದ ಎಲ್ಲ ಶಾಸಕರು, ಡಿಎಫ್‌ಒಗಳು, ಜಿಲ್ಲಾ ಎಸ್ಪಿಗಳು, ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಅಧೀನ ಕಾರ್ಯದರ್ಶಿಗಳಿಗೆ ಆಹ್ವಾನ ಪತ್ರ ಕಳುಹಿಸಲಾಗುವುದು. ಎಲ್ಲರೂ ಬಂದು ಚರ್ಚಿಸಿ ಅಭಿಪ್ರಾಯ ಮಂಡನೆಯಲ್ಲಿ ಪಾಲ್ಗೊಳ್ಳಬಹುದು. ಸಮಸ್ಯೆಗಳ ಕುರಿತು ದಾಖಲೆ ಸಮೇತ ವಾದಗಳ ಮಂಡನೆ ನಡೆಯಲಿದೆ ಎಂದು ಶಶಿಧರ ಶೆಟ್ಟಿ ತಿಳಿಸಿದರು.

ಬದಲಾವಣೆಗೆ ಪ್ರಯತ್ನ: ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಮಾತನಾಡಿ ಕಳೆದ ನವೆಂಬರ್‌ನಲ್ಲೇ 30 ಡಿ.ಸೆ. ಉಷ್ಣಾಂಶ ಜಿಲ್ಲೆಯಲ್ಲಿ ದಾಖಲಾಗಿದೆ. ಬರಗಾಲ-ಜಲಪ್ರವಾಹಗಳೆರಡೂ ಜಿಲ್ಲೆಯನ್ನು ಕಾಡುತ್ತಿವೆ. ಹೀಗೇಕೆ ಆಗುತ್ತಿದೆ ಎನ್ನುವ ಅಧ್ಯಯನ ಆಗಿಲ್ಲ. ವನ್ಯಜೀವಿಗಳ ಕಾಯ್ದೆ ಇನ್ನೂ ಕಾರ್ಯಗತವಾಗಿಲ್ಲ. ಜಲಮೂಲಗಳಲ್ಲಿ ಮಾನವ ಹಸ್ತಕ್ಷೇಪ ನಡೆಯುತ್ತಿದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ದುರಂತಗಳು ಮುಂದುವರಿಯಲಿದೆ. ಹಾಗಾಗಿ ಪರಿಸರ ಸಮ್ಮೇಳನದ ಮೂಲಕ ಬದಲಾವಣೆಗಾಗಿ ವಿಶೇಷ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.

ಈ ಸಂದರ್ಭ ದಿನೇಶ್ ಹೊಳ್ಳ ರಚಿಸಿದ ಸಮ್ಮೇಳನದ ಲೋಗೊ ಬಿಡುಗಡೆಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಸ್ವರ್ಣ ಸುಂದರ್ ಆನಂದ, ಪಾಂಗಾಳ, ರೋಶನ್ ಬಾಳಿಗ, ರತ್ನಾಕರ ಸುವರ್ಣ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News