ಸಾಮೂಹಿಕ ವಿವಾಹ ಕುರಿತು ರಾಜ್ಯಾದ್ಯಂತ ವಿಚಾರ ಸಂಕಿರಣ: ಕೋಟ

Update: 2020-02-13 15:29 GMT

ಉಡುಪಿ, ಫೆ.13: ರಾಜ್ಯದ ಸುಮಾರು 100 ಎ ದರ್ಜೆ ದೇವಾಲಯಗಳಲ್ಲಿ ಮುಜರಾಯಿ ಇಲಾಖೆ ವತಿಯಿಂದ ಎಪ್ರಿಲ್ 26ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುವುದು ಎಂದು ರಾಜ್ಯ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಗುರುವಾರ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಸಭಾಂಗಣದಲ್ಲಿ ಸಾಮೂಹಿಕ ಸರಳ ವಿವಾಹ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾ ಡುತಿದ್ದರು. ದೇವಾಲಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತಂತೆ ರಾಜ್ಯದ ಎಲ್ಲಾ ಸಂಸದರು, ವಿಧಾನ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಜಿಪಂ ಮತ್ತು ತಾಪಂ, ನಗರಸಭೆಗಳ ಅಧ್ಯಕ್ಷರು, ಉಪಾಧ್ಯಕರಿಗೆ ವೈಯಕ್ತಿಕವಾಗಿ ಪತ್ರ ಬರೆದು ತಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಕೋರಲಾಗಿದೆ. ಎಲ್ಲರೂ ಪಕ್ಷ ಬೇಧ ಮರೆತು ಕಾರ್ಯಕ್ರಮ ಆಯೋಜಿಸುವಂತೆ ಕೋರಲಾಗಿದೆ ಎಂದು ಸಚಿವ ಕೋಟ ತಿಳಿಸಿದರು.

ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲು ಯಾವುದೇ ಆರ್ಥಿಕ ಕೊರತೆ ಇಲ್ಲ. ರಾಜ್ಯದಲ್ಲಿ ವಾರ್ಷಿಕ 100 ಕೋಟಿ ರೂ ಆದಾಯ ತರುವ ದೇವಾಲಯಗಳಿದ್ದು , ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಾಮೂಹಿಕ ವಿವಾಹ ನಡೆಸಲು ಇಲಾಖೆ ಸಿದ್ದವಿದೆ ಎಂದರು.

ಯಶ್‌ ರಾಯಭಾರಿ: ಸಾಮೂಹಿಕ ವಿವಾಹ ಕಾರ್ಯಕ್ರಮದ ರಾಯಭಾರಿ ಗಳಾಗಿರುವ ಚಿತ್ರನಟ ಯಶ್ ಮತ್ತು ಇನ್ಪೋಸಿಸ್‌ನ ಸುಧಾಮೂರ್ತಿ ತಮ್ಮ ವೀಡಿಯೋ ಮತ್ತು ಧ್ವನಿ ಮುದ್ರಣದ ಮೂಲಕ ರಾಜ್ಯಾದ್ಯಂತ ಎಲ್ಲರನ್ನು ತಲುಪಲಿದ್ದಾರೆ ಎಂದು ಮುಜರಾಯಿ ಸಚಿವರು ಹೇಳಿದರು.

ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುವ ವಧು ವರರಿಗೆ ತಲಾ ರೂ. 55,000ಗಳ ವೆಚ್ಚದಲ್ಲಿ ಬಟ್ಟೆ ಮತ್ತು ಚಿನ್ನದ ತಾಳಿ, ಚಿನ್ನದ ಗುಂಡು ನೀಡುವುದರ ಜೊತೆಗೆ, ಕಂದಾಯ ಇಲಾಖೆ ವತಿಯಿಂದ ವಧುವಿಗೆ ಆದರ್ಶ ವಿವಾಹ ಯೋಜನೆಯಡಿ 10,000ಗಳ ನಿಶ್ಚಿತ ಠೇವಣಿ ಸೌಲಭ್ಯ, ಪರಿಶಿಷ್ಠ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸರಳ ವಿವಾಹ ಯೋಜನೆಯಡಿ 50,000 ರೂ.ಗಳ ಸೌಲ್ಯ ದೊರೆಯಲಿದೆ ಎಂದು ಕೋಟ ವಿವರಿಸಿದರು.

   ಏ.26ರಂದು ನಡೆಯುವ ಸಾಮೂಹಿಕ ವಿವಾಹಕ್ಕೆ ವಧುವರರ ನೊಂದಾವಣಿಗೆ ಮಾ.27 ಕೊನೆಯ ದಿನವಾಗಿರುತ್ತದೆ. ವಧು ವರರು ಅರ್ಜಿಗಳನ್ನು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳಿಂಧ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವಂತೆ ತಿಳಿಸಿದ ಕೋಟ ಶ್ರೀನಿವಾಸ ಪೂಜಾರಿ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗಡೆ, ಸುತ್ತೂರು ಮಠಾಧೀಶರು, ಸಿದ್ದಗಂಗಾ ಮಠಾಧೀಶರು ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಬಂದು ಹಾರೈಸಲಿದ್ದು, ವಿವಿಧ ಖಾಸಗಿ ಸಂಸ್ಥೆಗಳು ವಧು ವರರಿಗೆ ಉಚಿತ ಉಡುಗೊರೆಗಳನ್ನು ನೀಡಲು ಮುಂದೆ ಬಂದಿವೆ ಎಂದರು.
ಸಭೆಯಲ್ಲಿ ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್ ಶೆಟ್ಟಿ, ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಸುತ್ತಗುಂಡಿ , ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ , ಜಿಪಂ ಸದಸ್ಯ ಬಾಬು ಹೆಗ್ಡೆ ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News