ಫೆ.14: ಕೆಎಂಸಿಯಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ಅರಿವು ದಿನ

Update: 2020-02-13 15:32 GMT

ಮಂಗಳೂರು, ಫೆ.13: ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಯ ಸಂಜೀವಿನಿ ಸಭಾಂಗಣದಲ್ಲಿ ಫೆ.14ರಂದು ಬೆಳಗ್ಗೆ 10:15ಕ್ಕೆ ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ಅರಿವು ದಿನಾಚರಣೆ ನಡೆಯಲಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಕೆಎಂಸಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ.ಹರ್ಷಪ್ರಸಾದ್, ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್, ಉದ್ಯಮಿ ಡಾ.ಜಿ.ಶಂಕರ್ ಮುಖ್ಯಅತಿಥಿಗಳಾಗಿ ಭಾಗವಹಿಸು ವರು. ಕ್ಯಾನ್ಸರ್ ರೋಗದಿಂದ ಗುಣಮುಖರಾದ ಮಕ್ಕಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾವಹಿಸುವರು ಎಂದು ತಿಳಿಸಿದರು.

ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಪ್ರಕಾರ ಭಾರತದಲ್ಲಿ 10 ವರ್ಷಗಳ ಹಿಂದೆ ಮಕ್ಕಳಲ್ಲಿ ಪತ್ತೆಯಾಗುತ್ತಿದ್ದ ಶೇ.2.5 ಕ್ಯಾನ್ಸರ್ ಪ್ರಮಾಣ ಈಗ ಶೇ.5.5ಕ್ಕೆ ಏರಿಕೆಯಾಗಿದೆ. ಅಂದರೆ ಈ ಅವಧಿಯಲ್ಲಿ ದ್ವಿಗುಣಗೊಂಡಿದೆ. ಅಂದರೆ ಭಾರತದಲ್ಲಿ ವರ್ಷಕ್ಕೆ ಒಟ್ಟು ಸುಮಾರು 50 ಸಾವಿರ ಮಕ್ಕಳಲ್ಲಿ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ವಿವರಿಸಿದರು.

ದುಃಖದ ಸಂಗತಿಯೆಂದರೆ ಮಕ್ಕಳ ಕ್ಯಾನ್ಸರ್ ಪ್ರಕರಣಗಳಲ್ಲಿ 10 ಮಕ್ಕಳಲ್ಲಿ ಒಂದು ಮಗು ಮಾತ್ರ ಸಂಪೂರ್ಣ ಚಿಕಿತ್ಸೆ ಪಡೆಯುತ್ತಿದೆ. ಪರಿಣಾಮ ಸಾಮಾನ್ಯ ಮಕ್ಕಳ ಕ್ಯಾನ್ಸರ್‌ಗಳಾದ ಲಿಮ್‌ಫೋಮ ಮತ್ತು ಲ್ಯುಕೇಮಿಯಾವನ್ನು ಗುಣಪಡಿಸುವ ಪ್ರಮಾಣವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ.80 ಇದ್ದರೆ, ಭಾರತದಲ್ಲಿ ಶೇ.30ಕ್ಕಿಂತ ಕಡಿಮೆ ಇದೆ ಎಂದರು.

ಕೆಎಂಸಿ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಕಮಲಾಕ್ಷಿ ಭಟ್ ಮಾತನಾಡಿ, ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನಾಚರಣೆಯನ್ನು 2002ರಲ್ಲಿ ‘ಚೈಲ್ಡ್ ಹುಡ್ ಕ್ಯಾನ್ಸರ್ ಇಂಟರ್‌ನ್ಯಾಶನಲ್’ ಆರಂಭಿಸಿದ್ದು, ಜಗತ್ತಿನಾದ್ಯಂತ ಫೆ.15 ರಂದು ಈ ದಿನಾಚರಣೆ ನಡೆಯುತ್ತಿದೆ.ಚೈಲ್ಡ್ ಹುಡ್‌ಕ್ಯಾನ್ಸರ್ ಇಂಟರ್‌ನ್ಯಾಷನಲ್ 88 ದೇಶಗಳಲ್ಲಿ 171 ಸದಸ್ಯ ಸಂಸ್ಥೆಗಳ ಜಾಗತಿಕ ಜಾಲ ಹೊಂದಿದೆ. ಕ್ಯಾನ್ಸರ್‌ನಿಂದ ಸಂಭವಿಸುವ ಮರಣ ಪ್ರಮಾಣ ಕಡಿಮೆ ಮಾಡುವುದು ಮತ್ತು ಕ್ಯಾನ್ಸರ್‌ಸಂಬಂಧಿತ ನೋವು ಮತ್ತು ಸಂಕಟಗಳನ್ನು ಹೋಗಲಾಡಿಸುವ ಜಾಗತಿಕ ಗುರಿಯನ್ನು ಇದು ಹೊಂದಿದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯಲ್ಲಿ ಪ್ರಸ್ತುತ ಪ್ರತೀ ತಿಂಗಳು ಸುಮಾರು 80 ಹೊಸ ಮಕ್ಕಳ ಕ್ಯಾನ್ಸರ್ ಪ್ರಕರಣಗಳನ್ನು ಪರೀಕ್ಷಿಸಲಾಗುತ್ತಿದೆ. ಮಕ್ಕಳ ದೇಹವು ಚಿಕಿತ್ಸೆಗೆ ಬೇಗನೇ ಸ್ಪಂದಿಸುವ ಗುಣ ಹೊಂದಿದ್ದು, ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಪ್ರಕರಣದಲ್ಲಿ ಗುಣಹೊಂದುವ ಪ್ರಮಾಣವು ಶೇ.65-70 ರಷ್ಟಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಇನ್ಫಿನಿಟಿ ಎಂಟರ್ಟೈನ್‌ಮೆಂಟ್‌ನ ಮಾಲಕ ಧರ್ಮಿತ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News