ಮಂಗಳೂರು: ಅಡುಗೆ ಅನಿಲ ಬೆಲೆಯೇರಿಕೆ, ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ

Update: 2020-02-13 15:39 GMT

ಮಂಗಳೂರು, ಫೆ.13: ಅಡುಗೆ ಅನಿಲ ಬೆಲೆಯೇರಿಕೆ, ಕಾನೂನಿನ ದುರುಪಯೋಗ ಮತ್ತು ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಖಂಡಿಸಿ ವಿಮೆನ್ ಇಂಡಿಯಾ ಮೂವ್‌ಮೆಂಟ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಗರದ ಮಿನಿ ವಿಧಾನಸೌಧದ ಮುಂದೆ ಗುರುವಾರ ಒಲೆ ಉರಿಸುವ ಅಣಕು ಪ್ರದರ್ಶನದ ಮೂಲಕ ಪ್ರತಿಭಟನೆ ನಡೆಸಲಾಯಿತು.

ವಿಮ್ ಜಿಲ್ಲಾದ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿ ನಾವಿಲ್ಲಿ ಪದೇ ಪದೇ ಒಟ್ಟು ಸೇರುತ್ತಿರುವುದು ಡಿಜಿಟಲ್ ಇಂಡಿಯಾದ ಮಹಿಮೆಯಾಗಿದೆ. ಒಂದೇ ದಿನದಲ್ಲಿ ಅಡುಗೆ ಅನಿಲ ಬೆಲೆ ಪ್ರತೀ ಸಿಲಿಂಡರ್ ಗೆ 145.5 ರೂ. ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ಹೊರಲು ಸಾಧ್ಯವಾಗದ ಭಾರವಾಗಿದೆ. ಹಣದುಬ್ಬರ, ದಿನಬಳಕೆ ಸಾಮಗ್ರಿಗಳ ಬೆಲೆಯೇರಿಕೆ, ನಿರುದ್ಯೋಗಿಗಳಿಂದ ಈಗಾಗಲೇ ತತ್ತರಿಸುತ್ತಿರುವ ಜನತೆಗೆ ಅನಿಲ ಬೆಲೆಯೇರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ಕೇಂದ್ರ ಸರಕಾರವು ತಾನು ಜನಪರವಾಗಿಲ್ಲ ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು.

ಬೀದರಿನ ಶಾಹೀನ್ ವಿದ್ಯಾ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವಕ್ಕೆ ಸಿಎಎ ವಿರುದ್ಧ ನಡೆಸಿದ ನಾಟಕದಲ್ಲಿನ ಒಂದು ದೃಶ್ಯಕ್ಕೆ ಸಂಬಂಧಿಸಿ ವಿದ್ಯಾರ್ಥಿನಿಯ ತಾಯಿ ಮತ್ತು ಶಾಲೆಯ ಮುಖ್ಯ ಶಿಕ್ಷಕಿಯ ವಿರುದ್ಧ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳನ್ನು ನಿರಂತರ 5-6 ದಿನಗಳಲ್ಲಿ ಪೊಲೀಸರು ವಿಚಾರಣೆ ನಡೆಸಿರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸಿ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಿಂದ ಸಂಸತ್ ಭವನಕ್ಕೆ ಪ್ರತಿಭಟನಾ ರ್ಯಾಲಿ ನಡೆಸಿದ ವಿದ್ಯಾರ್ಥಿಗಳು ಮತ್ತು ನಾಗರಿಕರ ಮೇಲೆ ದೆಹಲಿ ಪೊಲೀಸರು ಅತ್ಯಂತ ಕ್ರೂರವಾಗಿ ಲಾಠಿ ಪ್ರಹಾರ ನಡೆಸಿರುವುದು ಕೂಡ ಖಂಡನಾರ್ಹ ಎಂದು ನಸ್ರಿಯಾ ಬೆಳ್ಳಾರೆ ಹೇಳಿದರು.

ಎನ್‌ಡಬ್ಲುಎಫ್ ಮಂಗಳೂರು ವಲಯ ಕಾರ್ಯದರ್ಶಿ ಮಿಸ್ರಿಯಾ ಕಣ್ಣೂರು ಮಾತನಾಡಿದರು. ಈ ಸಂದರ್ಭ ವಿಮ್ ಜಿಲ್ಲಾ ಸಮಿತಿ ಸದಸ್ಯೆ ಸಂಶಾದ್ ಕುಲಾಯಿ, ಜಿಲ್ಲಾ ಸಮಿತಿ ಸದಸ್ಯರಾದ ಸಫಿಯಾ, ಮರಿಯಂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News