ಐಐಟಿ ಖರಗ್‌ಪುರ : ಪೌರತ್ವ ಕಾಯ್ದೆ ಕುರಿತ ಚರ್ಚೆಗೆ ನೀಡಿದ್ದ ಅನುಮತಿ ರದ್ದು

Update: 2020-02-13 16:15 GMT

ಕೋಲ್ಕತಾ, ಫೆ.13: ಐಐಟಿ ಖರಗ್‌ಪುರದಲ್ಲಿ ಪೌರತ್ವ ಕಾಯ್ದೆ ಕುರಿತು ಚರ್ಚಾ ಕಾರ್ಯಕ್ರಮಕ್ಕೆ ನೀಡಲಾದ ಅನುಮತಿಯನ್ನು ಹಿಂಪಡೆದ ಕಾರಣ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ವರದಿಯಾಗಿದೆ.

ಐಐಟಿ ಖರಗ್‌ಪುರದ ಸಂಶೋಧನಾ ವಿದ್ಯಾರ್ಥಿಗಳ ತಂಡ ‘ಎಜುಕೇಶನ್ ಗ್ರೂಪ್’ ಈ ಕಾರ್ಯಕ್ರಮ ಆಯೋಜಿಸಿತ್ತು. ಸಂಸ್ಥೆಯ ಉದ್ಯೋಗಿಗಳೇ ನಿರ್ವಹಿಸುವ ಸಿಬಂದಿಗಳ ಕ್ಲಬ್‌ನ ಆಶ್ರಯದಲ್ಲಿ ಐಐಟಿ ಕ್ಯಾಂಪಸ್‌ನಲ್ಲಿ ಫೆ.12ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಮೊದಲು ಅನುಮತಿ ನೀಡಿದ್ದ ಕ್ಲಬ್‌ನವರು ಬಳಿಕ ಅನುಮತಿ ನಿರಾಕರಿಸಿದ್ದಾರೆ . ಕಾರಣಾಂತರಗಳಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಫೆ.12ರಂದು ಮಾಹಿತಿ ನೀಡಿದ ಕಾರಣ ಕಾರ್ಯಕ್ರಮ ರದ್ದುಗೊಳಿಸಿರುವುದಾಗಿ ಎಜುಕೇಶನ್ ಗ್ರೂಫ್‌ನ ವಕ್ತಾರರು ಹೇಳಿದ್ದಾರೆ.

ಐಐಟಿಯ ಉನ್ನತಾಧಿಕಾರಿಗಳ ಸೂಚನೆಯಂತೆ ವಿವಾದಾತ್ಮಕ ವಿಷಯಗಳ ಕುರಿತ ಚರ್ಚಾ ಕಾರ್ಯಕ್ರಮವನ್ನು ಕ್ಯಾಂಪಸ್‌ನೊಳಗೆ ಆಯೋಜಿಸುವಂತಿಲ್ಲ . ಉದ್ವಿಗ್ನತೆ, ವಿಭಜನೆ ಮತ್ತು ಅನಪೇಕ್ಷಿತ ಘಟನೆಗಳಿಗೆ ಕಾರಣವಾಗಬಹುದಾದ ಯಾವುದೇ ಕಾರ್ಯಕ್ರಮಗಳನ್ನೂ ಕ್ಯಾಂಪಸ್‌ ನೊಳಗೆ ಆಯೋಜಿಸಬಾರದು. ಕ್ಯಾಂಪಸ್‌ನ ಹೊರಗಡೆ ಆಯೋಜಿಸುವುದಕ್ಕೆ ಅಭ್ಯಂತರವಿಲ್ಲ ಎಂದು ತಿಳಿಸಲಾಗಿದೆ. ಆದರೆ ಈ ಚರ್ಚೆ ಪೌರತ್ವ ಕಾಯ್ದೆಗೆ ಪರ ಅಥವಾ ವಿರೋಧವಾಗಿರಲಿಲ್ಲ. ಕಾಯ್ದೆಯ ಕುರಿತ ವಿಶ್ಲೇಷಣೆಯಾಗಿತ್ತು . ಚರ್ಚೆಗೆ ಆಹ್ವಾನಿಸಿದ್ದ ಮೂವರಲ್ಲಿ ಯಾರೂ ರಾಜಕಾರಣಿಗಳಾಗಿರಲಿಲ್ಲ ಎಂದು ವಕ್ತಾರರು ಹೇಳಿದ್ದಾರೆ. ಸಮಕಾಲೀನ ವಿಷಯಗಳ ಬಗ್ಗೆ ಚರ್ಚಿಸಲು ಐಐಟಿಯ ಆಡಳಿತ ವರ್ಗಕ್ಕೆ ಇಷ್ಟವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿದ್ದ ಮಾನವಹಕ್ಕು ಕಾರ್ಯಕರ್ತ ರಂಜಿತ್ ಸುರ್ ಪ್ರತಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News