ಮುಝಫರ್‌ಪುರ ಗಲಭೆ ಪ್ರಕರಣ: ವಿಚಾರಣೆಗೆ ಹಾಜರಾದ ಸಚಿವ ಸಂಜೀವ್ ಬಲ್ಯಾನ್

Update: 2020-02-13 16:23 GMT

ಲಕ್ನೊ, ಫೆ.13: 2013ರ ಮುಝಫರ್‌ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಇಂದು ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಮುಝಫರ್‌ನಗರ ಗಲಭೆ ಸಂದರ್ಭ ನಿಷೇಧಾಜ್ಞೆ ಉಲ್ಲಂಘಿಸಿರುವುದು ಹಾಗೂ ಕೋಮು ಉದ್ವಿಗ್ನತೆ ಪ್ರಚೋದಿಸಿದ ಆರೋಪ ಸಂಜೀವ್ ಬಲ್ಯಾನ್ ಮೇಲಿದೆ.

ಪ್ರಕರಣದ ಇತರ ಆರೋಪಿಗಳಾದ ಮಾಜಿ ಸಂಸದ ಭರತೇಂದು ಸಿಂಗ್ ಮತ್ತು ವಿಎಚ್‌ಪಿಯ ಸಾಧ್ವಿ ಪ್ರಾಚಿ ವಿಚಾರಣೆಗೆ ಗೈರಾಗಿದ್ದರಿಂದ ಇವರು ಎಪ್ರಿಲ್ 3ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ವಿಶೇಷ ಕೋರ್ಟ್‌ನ ನ್ಯಾಯಾಧೀಶ ರಾಮ್‌ಶುಧ್ ಸಿಂಗ್ ಸೂಚಿಸಿದರು. ಅಲ್ಲದೆ ಆರೋಪಿಗಳಾದ ಉತ್ತರಪ್ರದೇಶ ಸಚಿವ ಸುರೇಶ್ ರಾಣಾ ಹಾಗೂ ಇತರ ಬಿಜೆಪಿ ಮುಖಂಡರೂ ಎಪ್ರಿಲ್ 3ರ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದರು.

2013ರ ಆಗಸ್ಟ್ 30ಂದು ನಿಷೇಧಾಜ್ಞೆ ಉಲ್ಲಂಘಿಸಿ ನಾಗ್ಲ ಮಡೋರ್ ಜಿಲ್ಲೆಯಲ್ಲಿ ನಡೆದ ಪಂಚಾಯತ್ ಸಭೆಯಲ್ಲಿ ಭಾಗವಹಿಸಿದ್ದಲ್ಲದೆ ಅಲ್ಲಿ ಮಾಡಿದ ಭಾಷಣದ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಇವರ ಮೇಲಿದೆ. 2013ರಲ್ಲಿ ಮುಝಾಫರ್‌ಪುರ ಹಾಗೂ ನೆರೆಯ ಜಿಲ್ಲೆಯಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ 60ಕ್ಕೂ ಅಧಿಕ ಜನ ಸಾವಿಗೀಡಾಗಿದ್ದು 40,000ಕ್ಕೂ ಹೆಚ್ಚು ಜನ ನೆಲೆ ಕಳೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News