ನಿರ್ಭಯಾ ಆರೋಪಿಗಳ ಮರಣದಂಡನೆ ದಿನಾಂಕ ನಿರ್ಧಾರದ ವಿಚಾರಣೆ ಮುಂದೂಡಿಕೆ
Update: 2020-02-13 22:04 IST
ಹೊಸದಿಲ್ಲಿ, ಫೆ. 13: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಮರಣದಂಡನೆ ನಿರ್ಧಾರದ ನಿರ್ಣಾಯಕ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಮತ್ತೊಮ್ಮೆ ಮುಂದೂಡಿದೆ.
ನಾಲ್ವರು ಆರೋಪಿಗಳ ವಿರುದ್ಧ ಹೊಸ ಡೆತ್ ವಾರಂಟ್ ಹೊರಡಿಸುವಂತೆ ಕೋರಿ ನಿರ್ಭಯಾ ಹೆತ್ತವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ದಿಲ್ಲಿಯ ಪಾಟಿಯಾಲ ಹೌಸ್ ಕೋರ್ಟ್ ಸೋಮವಾರಕ್ಕೆ ಮುಂದೂಡಿತು.
ಕೆಲವು ಆರೋಪಿಗಳ ಮನವಿ ನ್ಯಾಯಾಲಯ ಹಾಗೂ ರಾಷ್ಟ್ರಪತಿ ಅವರಲ್ಲಿ ಬಾಕಿ ಉಳಿದಿರುವುದರಿಂದ ಈ ಹಿಂದೆ ನ್ಯಾಯಾಲಯ ಹೊರಡಿಸಿದ್ದ ಎರಡು ಡೆತ್ ವಾರಂಟ್ ಗಳನ್ನು ಬದಿಗಿರಿಸಲಾಗಿತ್ತು. ನಾಲ್ವರು ಆರೋಪಿಗಳಿಗೆ ಡೆತ್ ವಾರಂಟ್ ಹೊರಡಿಸುವಂತೆ ಕೋರಿ ನಿರ್ಭಯಾ ಹೆತ್ತವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪಾಟಿಯಾಲ ಹೌಸ್ ಕೋರ್ಟ್ ಗುರುವಾರ ಆರಂಭಿಸಿತು. ನಾಲ್ವರು ಆರೋಪಿಗಳಲ್ಲಿ ಓರ್ವನಾದ ಪವನ್ ಗುಪ್ತಾನ ವಕೀಲರನ್ನು ಬದಲಾಯಿಸಿರುವುದನ್ನು ಗಮನಿಸಿ ನ್ಯಾಯಾಲಯ ಮನವಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.