ಉಳ್ಳಾಲ ತಾಲೂಕು ಅಧಿಕೃತ ಘೋಷಣೆ

Update: 2020-02-13 17:09 GMT

ಮಂಗಳೂರು, ಫೆ.13: ಮಂಗಳೂರು ವಿಧಾನಸಭಾ ಕ್ಷೇತ್ರದ ಶೇ.95ರಷ್ಟು ಪ್ರದೇಶವನ್ನೊಳಗೊಂಡ ‘ಉಳ್ಳಾಲ’ ತಾಲೂಕು ಅಧಿಕೃತವಾಗಿ ಬುಧವಾರ ಘೋಷಿಸಲ್ಪಟ್ಟಿದೆ. ಶಾಸಕ ಯು.ಟಿ.ಖಾದರ್ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅಂದರೆ 2019ರ ಫೆ.28ರಂದು ಉಳ್ಳಾಲ ತಾಲೂಕು ರಚನೆಯ ಬಗ್ಗೆ ಘೋಷಿಸಿದ್ದರು.

ತಾಲೂಕಿನ ಕೇಂದ್ರ ಸ್ಥಾನ ಎಲ್ಲಿ ಎಂಬುದರ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದು ತಾಲೂಕು ರಚನೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ವೇಗ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರು ತಾಲೂಕಿನ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್ ಮತ್ತು ತಲಪಾಡಿ, ಕಿನ್ಯ, ಮಂಜನಾಡಿ, ಬೆಳ್ಮ, ಮುನ್ನೂರು, ಅಂಬ್ಲಮೊಗರು, ಕೊಣಾಜೆ, ಹರೇಕಳ, ಪಾವೂರು, ಬೋಳಿಯಾರು ಹಾಗೂ ಬಂಟ್ವಾಳ ತಾಲೂಕಿನ ಪಜೀರು, ನರಿಂಗಾನ, ಬಾಳೆಪುಣಿ-ಕೈರಂಗಳ, ಕುರ್ನಾಡು, ಇರಾ, ಸಜಿಪನಡು, ಸಜಿಪಪಡು, ಚೇಳೂರು ಗ್ರಾಮಗಳು ನೂತನವಾಗಿ ರಚಿಸಲ್ಪಟ್ಟ ‘ಉಳ್ಳಾಲ’ ತಾಲೂಕಿಗೆ ಸೇರ್ಪಡೆಗೊಳ್ಳಲಿವೆ.

ಇನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನಲ್ಲಿರುವ ಮೇರಮಜಲು, ತುಂಬೆ, ಪುದು ಗ್ರಾಮಗಳು ‘ಉಳ್ಳಾಲ’ ತಾಲೂಕಿಗೆ ಸೇರ್ಪಡೆಗೊಂಡಿಲ್ಲ. ಈ ಮಧ್ಯೆ ಸಜಿಪ ಪರಿಸರದ ಜನರು ‘ಉಳ್ಳಾಲ’ ತಾಲೂಕಿಗೆ ಸೇರ್ಪಡೆಗೊಳ್ಳುವುದನ್ನು ವಿರೋಧಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇದೀಗ ಮಂಗಳೂರು ತಾಲೂಕು ಮೂಡುಬಿದಿರೆ, ಮುಲ್ಕಿ, ಉಳ್ಳಾಲ ತಾಲೂಕಾಗಿ ವಿಂಗಡಣೆ ಹೊಂದಿದ್ದು, ಆಡಳಿತಾತ್ಮಕವಾಗಿ ಜನರ ಪರದಾಟಕ್ಕೆ ಒಂದಷ್ಟು ಕಡಿವಾಣ ಬೀಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News