​ಮೈಸೂರಿಗೆ ಹೊರಟ ಮಂಗಳೂರಿನ ಮೂವರು ಕಾಣೆ

Update: 2020-02-13 18:26 GMT

ಮಂಗಳೂರು, ಫೆ.13: ವ್ಯವಹಾರ ನಿಮಿತ್ತ ಮೈಸೂರಿಗೆ ಹೊರಟಿದ್ದ ಮಂಗಳೂರಿನ ಮೂವರು ಕಾಣೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ವೆಲೆನ್ಸಿಯಾ ನಿವಾಸಿಗಳಾದ ಸಿರಾಜುದ್ದೀನ್, ಅವರ ಅಣ್ಣ ಸಂಶುದ್ದೀನ್ ಮತ್ತವರ ಸ್ನೇಹಿತ ಶಾಹ್ ನವಾಝ್ ಕಾಣೆಯಾದವರು.

ಫೆ.11ರಂದು ಇವರು ವ್ಯವಹಾರ ನಿಮಿತ್ತ ಮೈಸೂರಿಗೆ ಹೋಗಿ ಬರುವೆವು ಎಂದು ಕಾರಿನಲ್ಲಿ ತೆರಳಿದ್ದರು. ಅಂದು ಸಂಜೆ 4:30ಕ್ಕೆ ಸಿರಾಜುದ್ದೀನ್ ತನ್ನ ಪತ್ನಿಗೆ ಕರೆ ಮಾಡಿ ಮೈಸೂರು ತಲುಪಲು 1 ಗಂಟೆ ಬೇಕಾಗುತ್ತದೆ ಎಂದು ತಿಳಿಸಿದ್ದರು. ರಾತ್ರಿ ಸುಮಾರು 8:30ಕ್ಕೆ ಪತ್ನಿ ಫರಾ ತನ್ನ ಪತಿ ಸಿರಾಜುದ್ದೀನ್‌ನ ಮೊಬೈಲ್‌ಗೆ ಕರೆ ಮಾಡಿದಾಗ ರಿಂಗ್ ಆಗಿದೆ. ಬಳಿಕ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಬಳಿಕ ಮೂವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರನ್ನು ಪತ್ತೆಹಚ್ಚಿಕೊಡಬೇಕು ಎಂದು ಫರಾ ಪಾಂಡೇಶ್ವರ ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.

41 ವರ್ಷ ಪ್ರಾಯದ ಸಿರಾಜುದ್ದೀನ್ ಮತ್ತು 43 ವರ್ಷ ಪ್ರಾಯದ ಸಂಶುದ್ದೀನ್ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ ಹೊಂದಿದ್ದು, ಕನ್ನಡ, ಹಿಂದಿ, ಮಲಯಾಳಂ ಮಾತನಾಡುತ್ತಾರೆ. 36 ವರ್ಷ ಪ್ರಾಯದ ಶಹನವಾಝ್ 5.7 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದಾರೆ. ಮಲಯಾಳಂ ಮಾತನಾಡುತ್ತಾರೆ. ಇವರನ್ನು ಕಂಡವರು ಪಾಂಡೇಶ್ವರ ಠಾಣೆ (0824-2220518) ಅಥವಾ ನಗರ ನಿಯಂತ್ರಣ ಕೊಠಡಿ (0824-2220500)ಗೆ ಮಾಹಿತಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News