×
Ad

ರಾಜ್ಯ ಬಿಜೆಪಿಯದ್ದು ದರಿದ್ರ ಸರಕಾರ; ಶೂನ್ಯ ಸಾಧನೆ: ರಮಾನಾಥ ರೈ

Update: 2020-02-14 21:01 IST

ಮಂಗಳೂರು, ಫೆ.14: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬಂದ ಮೇಲೆ ಹೆಚ್ಚು ಸಮಸ್ಯೆಗಳು ಉದ್ಘವಿಸುತ್ತಿವೆ. ಸಿದ್ದರಾಮಯ್ಯ ಹೇಳಿದಂತೆ ಇದು ದರಿದ್ರ ಸರಕಾರ. ಇರುವ ಯೋಜನೆಗಳನ್ನೇ ಸರಕಾರದ ಸ್ಥಗಿತಗೊಳಿಸುವ ಮೂಲಕ ಶೂನ್ಯ ಸಾಧನೆ ದಾಖಲಿಸಿದೆ ಎಂದು ಮಾಜಿ ಸಚಿವ ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಸಾಕಷ್ಟು ಸಮಸ್ಯೆಗಳು ಬಿಗಡಾಯಿಸಿವೆ. ಬಿಜೆಪಿ ಸರಕಾರದಲ್ಲಿ ಸಮಸ್ಯೆ ಪರಿಹಾರ ಮಾಡುವಲ್ಲಿ ಸಂಪೂರ್ಣ ವಿಫಲಾಗಿದೆ. ಸಿದ್ದರಾಮಯ್ಯ ದರಿದ್ರ ಸರಕಾರ ಎಂದಿದ್ದರಲ್ಲಿ ಎಳ್ಳಷ್ಟು ತಪ್ಪಿಲ್ಲ ಎಂದು ಮಾಜಿ ಮುಖ್ಯಮಂತ್ರಿಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಸಹಿತ 17 ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಲಕ್ಷಾಂತರ ಮಂದಿ ಬದುಕು ಕಳೆದುಕೊಂಡರು. ಕೋಟ್ಯಂತರ ರೂ. ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದೆ. ರಾಜ್ಯ, ಕೇಂದ್ರ ಸರಕಾರದಿಂದ ಹಣವೇ ಬಿಡುಗಡೆಯಾಗಿಲ್ಲ. ಕೊನೆಗೆ ಸಂತ್ರಸ್ತರಿಗೆ ಸ್ಪಂದಿಸುವನ್ನೂ ಸರಕಾರ ಮಾಡಿಲ್ಲ ಎಂದು ಸರಕಾರದ ಕಾರ್ಯವೈಖರಿಯನ್ನು ಟೀಕಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರಕಾರದಿಂದ 2,800 ಕೋಟಿ ರೂ. ಬರುವುದು ಬಾಕಿ ಇದೆ. ಜತೆಗೆ ರಾಜ್ಯ ಸರಕಾರವು ಕೇಂದ್ರಕ್ಕೆ ಅತಿಹೆಚ್ಚು ಜಿಎಸ್‌ಟಿ ಪಾವತಿಸಿದೆ. ನ್ಯಾಯವಾಗಿ ದೊರಕಬೇಕಾದ ಸಾವಿರಾರು ಕೋಟಿ ರೂ. ತರುವುದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ವಿಫಲವಾಗಿದೆ. ಅಲ್ಲದೆ, ಶಾಸಕರ ಅನುದಾನದಲ್ಲೂ ನಯಾಪೈಸೆ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮನಪಾ ಸದಸ್ಯರಾದ ನವೀನ್ ಡಿಸೋಜ, ಅಬ್ದುಲ್ ರವೂಫ್, ಟಿ.ಕೆ. ಸುಧೀರ್, ವಿಶ್ವಾಸ್ ದಾಸ್, ನಿರಜ್‌ಪಾಲ್, ಸಂತೋಷ್ ಶೆಟ್ಟಿ, ಸುಬೋದ್ ಆಳ್ವ, ಶಬ್ಬೀರ್, ನಜೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

ದಲಿತ ನಾಯಕನಿಗೇಕೆ ಸಚಿವ ಸ್ಥಾನ ನೀಡಿಲ್ಲ ?

ಎಂಟು ಬಾರಿ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗಿರುವ ಹಿರಿಯ ಕಾಂಗ್ರೆಸಿಗ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಇಲ್ಲಿನ ರಾಜಕೀಯ ಮುಖಂಡ ರೊಬ್ಬರು ಮನಬಂದಂತೆ ಮಾತನಾಡಿದ್ದಾರೆ. ಖರ್ಗೆ ಅವರ ರಾಜಕೀಯ ಜೀವನದಷ್ಟು ವಯಸ್ಸು ಈ ಮುಖಂಡರಿಗೆ ಆಗಿಲ್ಲ. ಹಾಗಿರುವಾಗ ಖರ್ಗೆ ವಿರುದ್ಧ ಮಾತನಾಡಲು ಇವರಿಗೆ ನೈತಿಕತೆಯೇ ಇಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ದಲಿತ ಮುಖಂಡ ಖರ್ಗೆ ವಿರುದ್ಧ ಮಾತನಾಡುವ ಈ ಮುಖಂಡರು ಅವರದೇ ಪಕ್ಷದಲ್ಲಿ ಹಿರಿಯರಾಗಿರುವ ಜಿಲ್ಲೆಯ ದಲಿತ ನಾಯಕನಿಗೆ ಸಚಿವ ಸ್ಥಾನ ನೀಡಲು ಇನ್ನೂ ಯಾಕೆ ಸಾಧ್ಯವಾಗಿಲ್ಲ ಎಂದು ರಮಾನಾಥ ರೈ ಪ್ರಶ್ನಿಸಿದರು. ಇದು ಬಿಜೆಪಿಗರಿಗೆ ದಲಿತರ ಬಗ್ಗೆ ಇರುವ ಪ್ರೀತಿಯನ್ನು ತೋರಿಸುತ್ತದೆ ಎಂದು ರಮಾನಾಥ ರೈ ವ್ಯಂಗ್ಯವಾಡಿದರು.

ಅಡುಗೆ ಅನಿಲ ದರ ಏರಿಕೆಗೆ ಖಂಡನೆ

ಕೇಂದ್ರ ಸರಕಾರವು ಅಡುಗೆ ಅನಿಲ ದರವನ್ನು ಏಕಾಏಕಿ 145 ರೂ.ನ್ನು ಏರಿಕೆ ಮಾಡಿರುವುದು ಖಂಡನೀಯ. ಯುಪಿಎ, ಕಾಂಗ್ರೆಸ್ ಸರಕಾರಗಳು ಇದ್ದಾಗ ದರದಲ್ಲಿ ಸ್ಪಲ್ಪ ಏರಿಕೆಯಾದರೆ ಬೊಬ್ಬೆ ಹೊಡೆಯುತ್ತಿದ್ದವರು ಈಗ ಸ್ತಬ್ಧರಾಗಿದ್ದಾರೆ. ದೆಹಲಿಯ ಚುನಾವಣೆಯ ಬೆನ್ನಲ್ಲೇ ಅಡುಗೆ ಅನಿಲ ದರ ಏರಿಕೆ ಮಾಡಿರುವುದು ಜನರ ಮೇಲೆ ಕೊಟ್ಟ ದೊಡ್ಡ ಬರೆಯಾಗಿದೆ. ಇದರಿಂದ ದೇಶವೇ ಬೆಚ್ಚಿ ಬಿದ್ದಿದೆ ಎಂದು ಮಾಜಿ ಸಚಿವ ರಮಾನಾಥ ರೈ ಟೀಕಿಸಿದರು. ಇದರ ವಿರುದ್ಧ ಫೆ.15ರಂದು ಸಂಜೆ 5 ಗಂಟೆಗೆ ಕಾಂಗ್ರೆಸ್‌ನಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News