ಭದ್ರತಾ ಮಂಡಳಿಯ ಸುಧಾರಣಾ ಪ್ರಕ್ರಿಯೆ ಪಾರದರ್ಶಕವಾಗಿರಲಿ: ಜಿ4 ದೇಶಗಳ ಒತ್ತಾಯ

Update: 2020-02-14 16:27 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಫೆ. 14: ಬಹುಕಾಲದಿಂದ ಬಾಕಿಯಾಗಿರುವ ಸುಧಾರಣೆಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತರುವುದು ವಿಶ್ವಸಂಸ್ಥೆಯ ಅಂತರ್ ಸರಕಾರಿ ಸಮಾಲೋಚನೆಯ ಆಣತಿಯೇ ಹೊರತು, ಕೊನೆಯೇ ಇಲ್ಲದೆ ಅದರ ಬಗ್ಗೆ ಚರ್ಚಿಸುವುದಲ್ಲ ಎಂದು ಬ್ರೆಝಿಲ್, ಜರ್ಮನಿ, ಜಪಾನ್ ಮತ್ತು ಭಾರತವನ್ನೊಳಗೊಂಡ ಜಿ4 ದೇಶಗಳ ಗುಂಪು ಹೇಳಿದೆ.

ಅಂತರ್ ಸರಕಾರಿ ಸಮಾಲೋಚನೆ ಮಾದರಿಯು ತನ್ನ ಪ್ರಸ್ತುತತೆಯನ್ನು ಯಾವತ್ತೋ ಕಳೆದುಕೊಂಡಿದೆ ಹಾಗೂ ಸುಧಾರಣೆ ಮಾತುಕತೆಗಳಲ್ಲಿ ಪ್ರಗತಿ ತರಲು ಅದನ್ನು ಸಮಾಲೋಚನೆಯನ್ನು ಪಾರದರ್ಶಕಗೊಳಿಸಬೇಕಾಗಿದೆ ಎಂದು ಗುಂಪು ಅಭಿಪ್ರಾಯಪಟ್ಟಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಬೇಕೆಂದು ಭಾರತ, ಜಪಾನ್, ಬ್ರೆಝಿಲ್ ಮತ್ತು ಜರ್ಮನಿ ದೇಶಗಳು ತುಂಬಾ ಸಮಯದಿಂದ ಒತ್ತಾಯಿಸುತ್ತಿವೆ. ವಿಶ್ವಸಂಸ್ಥೆಯ ಅತ್ಯುನ್ನತ ವೇದಿಕೆಯಲ್ಲಿ ಖಾಯಂ ಸದಸ್ಯ ಸ್ಥಾನ ಪಡೆಯುವ ಅರ್ಹತೆ ತನಗಿದೆ ಎಂದು ಭಾರತ ಪ್ರತಿಪಾದಿಸುತ್ತಾ ಬಂದಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಈ ದೇಶಗಳು ಮಾಡುವ ಪ್ರಯತ್ನಗಳನ್ನು ಪರಸ್ಪರರು ಬೆಂಬಲಿಸುತ್ತಾರೆ.

 ಅಂತರ್ ಸರಕಾರಿ ಸಮಾಲೋಚನೆಯಲ್ಲಿ ಪ್ರಗತಿಗಾಗಿ ಹೋರಾಡುವಂತೆ ಜಿ4 ದೇಶಗಳ ಪರವಾಗಿ ಮಾತನಾಡಿದ ವಿಶ್ವಂಸ್ಥೆಯಲ್ಲಿ ಭಾರತದ ಖಾಯಂ ರಾಯಭಾರಿ ಸೈಯದ್ ಅಕ್ಬರುದ್ದೀನ್ ವಿಶ್ವಸಂಸ್ಥೆಯ ಸದಸ್ಯ ದೇಶಗಳಿಗೆ ಕರೆ ನೀಡಿದರು.

‘‘ಇಲ್ಲಿನ ಪ್ರಗತಿಯ ಕೊರತೆಯು, ಈ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಕಾನೂನುಬದ್ಧತೆಯನ್ನು ಮಾತ್ರವಲ್ಲ ಜನರಲ್ ಅಸೆಂಬ್ಲಿಯನ್ನೇ ಪ್ರಶ್ನಾರ್ಹವಾಗಿಸುವ ಅಪಾಯವಿದೆ. ನಾವು ವಿಶ್ವಾಸಾರ್ಹ ಪ್ರಗತಿಯನ್ನು ಬಯಸುತ್ತೇವೆ. ಇದು ಇನ್ನೊಮ್ಮೆ ನಮ್ಮ ಕೈತಪ್ಪಿದರೂ, ಈ ಮಹತ್ವದ ವಿಷಯದಲ್ಲಿ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ಮರುಪರಿಶೀಲಿಸಲೂ ನಾವು ತಯಾರಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News