ಇಂಟರ್ ನೆಟ್ ಮೇಲಿನ ನಿರ್ಬಂಧ ಶೀಘ್ರ ಹಿಂಪಡೆಯಿರಿ: ಕಾಶ್ಮೀರ ಭೇಟಿ ಬಳಿಕ ಯುರೋಪ್ ಒಕ್ಕೂಟ

Update: 2020-02-14 17:03 GMT

ಹೊಸದಿಲ್ಲಿ, ಪೆ. 14: ಜಮ್ಮು ಹಾಗೂ ಕಾಶ್ಮೀರದಲ್ಲಿ ಸಹಜಸ್ಥಿತಿ ಮರು ಸ್ಥಾಪಿಸಲು ಭಾರತ ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಆದರೆ, ಉಳಿದಿರುವ ನಿರ್ಬಂಧಗಳನ್ನು ತ್ವರಿತವಾಗಿ ಹಿಂದೆ ತೆಗೆಯುವುದು ಮುಖ್ಯ ಎಂದು ಐರೋಪ್ಯ ಒಕ್ಕೂಟ ಶುಕ್ರವಾರ ಹೇಳಿದೆ. ಆಗಸ್ಟ್‌ನಿಂದ ನಿರ್ಬಂಧ ವಿಧಿಸಲಾದ ಜಮ್ಮು ಹಾಗೂ ಕಾಶ್ಮೀರಕ್ಕೆ ಭೇಟಿ ನೀಡಿದ ಬಳಿಕ ನಿಯೋಗ ಈ ಹೇಳಿಕೆ ನೀಡಿದೆ.

ಕೇಂದ್ರ ಸರಕಾರ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ 6 ತಿಂಗಳ ಬಳಿಕ ಐರೋಪ್ಯ ಒಕ್ಕೂಟದಿಂದ ಕೆಲವರು ಸೇರಿದಂತೆ 25 ರಾಷ್ಟ್ರಗಳ ರಾಜತಾಂತ್ರಿಕರು ಜಮ್ಮು ಹಾಗೂ ಕಾಶ್ಮೀರಕ್ಕೆ ಪರಿಸ್ಥಿತಿ ಸಮೀಕ್ಷೆ ನಡೆಸಲು ಎರಡು ದಿನಗಳ ಭೇಟಿಗಾಗಿ ಇಂದು ಶ್ರೀನಗರ ಹಾಗೂ ಜಮ್ಮುವಿಗೆ ಆಗಮಿಸಿದ್ದಾರೆ.

ಜರ್ಮನಿ, ಕೆನಡಾ, ಫ್ರಾನ್ಸ್, ಇಟಲಿ, ಪೋಲ್ಯಾಂಡ್, ನ್ಯೂಝಿಲ್ಯಾಂಡ್, ಮೆಕ್ಸಿಕೊ, ಅಫಘಾನಿಸ್ತಾನ, ಆಸ್ಟ್ರಿಯಾ, ಉಝ್ಬೇಕಿಸ್ತಾನ್ ಹಾಗೂ ಐರೋಪ್ಯ ಒಕ್ಕೂಟದ ರಾಯಭಾರಿಗಳು ಕೂಡ ಈ ನಿಯೋಗದಲ್ಲಿ ಇದ್ದಾರೆ.

‘‘ಜಮ್ಮು ಹಾಗೂ ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರು ಸ್ಥಾಪಿಸಲು ಭಾರತ ಸರಕಾರ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ನಿರ್ಬಂಧ ಮುಂದುವರಿದಿದೆ. ಮುಖ್ಯವಾಗಿ ಇಂಟರ್‌ನೆಟ್ ಹಾಗೂ ಮೊಬೈಲ್ ಸೇವೆ ಲಭ್ಯವಿಲ್ಲ. ಕೆಲವು ರಾಜಕೀಯ ನಾಯಕರೂ ಈಗಲೂ ಗೃಹ ಬಂಧನದಲ್ಲಿ ಇದ್ದಾರೆ ಎಂಬುದು ಈ ಭೇಟಿಯಲ್ಲಿ ದೃಢಪಟ್ಟಿದೆ’’ ಎಂದು ಐರೋಪ್ಯ ಒಕ್ಕೂಟದ ಹೇಳಿಕೆ ಶುಕ್ರವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News