ಹಿಂದುಳಿದ ವರ್ಗದ ಅಮಾಯಕ ಯುವಕರ ಕೈಗೆ ಕತ್ತಿ ಕೊಡುತ್ತಿರುವ ವೈದಿಕ ಶಕ್ತಿ: ಭಾಸ್ಕರ್ ಪ್ರಸಾದ್

Update: 2020-02-16 18:49 GMT

ಬಂಟ್ವಾಳ, ಫೆ.16: ತಮ್ಮ ಅಧಿಕಾರ, ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಧ್ಯ ಏಷಾದಿಂದ ಬಂದವರು ದೇಶ ಪ್ರೇಮ, ತ್ಯಾಗ, ಬಲಿದಾನದ ಹೆಸರಿನಲ್ಲಿ ದಲಿತ, ಹಿಂದುಳಿದ ಜಾತಿಗಳ ಅಮಾಯಕ ಯುವಕ, ಯುವತಿಯನ್ನು ಬ್ರೈನ್‍ವಾಶ್ ಮಾಡಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ ಆರ್ ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್)ಯನ್ನು ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಕೊಳ್ನಾಡು ಸಾಲೆತ್ತೂರು ವತಿಯಿಂದ ರವಿವಾರ ಸಾಲೆತ್ತೂರಿನಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಅನ್ನ, ನೀರು ಕೇಳಿ ಈ ದೇಶಕ್ಕೆ ಬಂದ ಮಧ್ಯ ಏಷಾದ್ಯದವರು ಆರೆಸ್ಸೆಸ್, ಬಜರಂಗದಳ, ಬಿಜೆಪಿ ಮೂಲಕ ಹಿಂದುಳಿದ ಜಾತಿಗಳ ಯುವಕರಿಗೆ ಹಾಗೂ ದುರ್ಗವಾಹಿನಿ ಮೂಲಕ ಹಿಂದುಳಿದ ಜಾತಿಗಳ ಯುವತಿಯರ ಕೈಗೆ ಕತ್ತಿ ಕೊಟ್ಟು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ದಾಳಿಗೆ ಪ್ರೇರಣೆ ನೀಡುತ್ತಿದ್ದಾರೆ. ಆದರೆ ಅವರ ಮಕ್ಕಳು ವಿದೇಶಗಳಲ್ಲಿ ಐಟಿ, ಬಿಟಿ ಕಂಪೆನಿಗಳಲ್ಲಿ ಉದ್ಯೋಗ ಮಾಡಿ ಸುಖಕರ ಜೀವನ ನಡೆಸುತ್ತಿದ್ದಾರೆ. ದಲಿತ, ಹಿಂದುಳಿದ ಜಾತಿಗಳ ಯುವಕ, ಯುವತಿಯರು ಬೀದಿಯಲ್ಲಿ ಬಲಿಯಾಗುತ್ತಿದ್ದಾರೆ. ಅವರ ಕುಟುಂಬಗಳು ದಿಕ್ಕಾಪಾಲಾಗುತ್ತಿವೆ. ಇದನ್ನು ಅರ್ಥ ಮಾಡಿ ದಲಿತ, ಹಿಂದುಳಿದ ಜಾತಿಗಳ ಯುವಕ, ಯುವತಿಯರು ಆರೆಸ್ಸೆಸ್, ಬಿಜೆಪಿಯಿಂದ ಹೊರಬರಬೇಕು ಎಂದು ಅವರು ಸಲಹೆ ನೀಡಿದರು.

ಕರಾವಳಿಯಲ್ಲಿ ವ್ಯಾಪಾರ, ವ್ಯವಹಾರ ನಡೆಸುತ್ತಿರುವ ಮುಸ್ಲಿಮರ ಕಂಪೆನಿಗಳಲ್ಲಿ ಶೇ.80ರಷ್ಟು ಮಂದಿ ದಲಿತ, ಹಿಂದುಳಿದ ಜಾತಿಗಳ ಜನರು ಕೆಲಸ ಮಾಡುತ್ತಿದ್ದಾರೆ. ಕರಾವಳಿಯಲ್ಲಿ ಕ್ರೈಸ್ತರ ವಿದ್ಯಾ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ, ಹಿಂದುಳಿದ ಜಾತಿಗಳ ಮಕ್ಕಳೇ ಶಿಕ್ಷಣ ಪಡೆಯುತ್ತಿದ್ದಾರೆ. ಅಂತಹ ಮುಸ್ಲಿಮ್ ಮತ್ತು ಕ್ರೈಸ್ತರ ವಿರುದ್ಧ ಯಾರದ್ದೋ ಮಾತು ಕೇಳಿ ದಲಿತ, ಹಿಂದುಳಿದ ಜಾತಿಗಳ ಯುವಕರು ದಾಳಿ ಮಾಡುತ್ತಿದ್ದಾರೆ. ದಾಳಿಗೆ ಪ್ರೆರೇಪಿಸುವವರು ಅವರ ಮನೆಯ ಅಂಗಳಕ್ಕೆ, ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಇದರ ಬಗ್ಗೆ ದಲಿತರು, ಹಿಂದುಳಿದ ಜಾತಿಗಳ ಯುವಕರು ಜಾಗೃತರಾಗಬೇಕು ಎಂದು ಅವರು ಹೇಳಿದರು.

ನಾನು ಆರೆಸ್ಸೆಸ್‍ನಲ್ಲಿ 20 ವರ್ಷಗಳ ಕಾಲ ಕೆಲಸ ಮಾಡಿದ್ದು ಹಾಗಾಗಿ ಆರೆಸ್ಸೆಸ್‍ನ ಒಳ ಹೊರ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಆರೆಸ್ಸೆಸ್‍ನಲ್ಲಿ ಇರುವುದು ಪೂರ್ತಿ ಮೋಸ, ಕುತಂತ್ರ. ದಲಿತ, ಶೂದ್ರ ಯುವಕರನ್ನು ಬಳಸಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ತಂತ್ರವಾಗಿದೆ. ಸಿಎಎ, ಎನ್‍ಆರ್ ಸಿ, ಎನ್‍ಪಿಆರ್ ಅನ್ನು ಬೆಂಬಲಿಸುವುದು ದೇಶ ಭಕ್ತಿಯಾಗಿದೆ ಎಂದು ವಾಟ್ಸ್ ಆ್ಯಪ್‍ಗಳ ಮೂಲಕ ಹರಿದಾಡಿಸಲಾಗುತ್ತಿದೆ. ನಿಜಾರ್ಥದಲ್ಲಿ ಎನ್‍ಆರ್‍ಸಿ, ಎನ್‍ಪಿಆರ್, ಸಿಎಎ ಸಂವಿಧಾನ ವಿರೋಧಿಯಾಗಿದ್ದು ಅದರ ವಿರುದ್ಧ ನಿರಂತರ ಚಳವಳಿ ನಡೆಯಲಿ ಎಂದು ಅವರು ಕರೆ ನೀಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಸಚಿವ ಬಿ.ರಮಾನಾಥ ರೈ, ಸಮಸ್ತ ಕೇರಳ ಕೇಂದ್ರ ಮುಶಾವರದ ಸದಸ್ಯ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಸಾಲೆತ್ತೂರು ನಿತ್ಯಾಧರ್ ಚರ್ಚ್‍ನ ವಂದನೀಯ ಫಾದರ್ ಹೆನ್ರಿ ಡಿಸೋಜ, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್‍ಕಟ್ಟೆ, ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಚಿಂತಕ ಮಹೇಂದ್ರ ಕುಮಾರ್ ಮಾತನಾಡಿದರು.

ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಷ್‍ಚಂದ್ರ ಶೆಟ್ಟಿ, ಇರಾ ಗ್ರಾಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ, ದ.ಕ. ಜಿಲ್ಲಾ ದಲಿತ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ.ಶೇಸಪ್ಪ ಬೆದ್ರಕಾಡು, ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಬಾಪಕುಂಞಿ ಕುಳಾಲು, ಸುಬ್ಬನ್ನ ನಾಯ್ಕ್ ಪಡಕುಂಜ, ಪದ್ಮನಾಭ ಶೆಟ್ಟಿ ಪಡಕುಂಜ, ಖಲಂದರ್ ಪರ್ತಿಪ್ಪಾಡಿ, ಹಕೀಂ ಪರ್ತಿಪ್ಪಾಡಿ, ಕೆ.ಎಂ.ಲತೀಫ್ ಪರ್ತಿಪ್ಪಾಡಿ, ಮುಹಮ್ಮದ್ ಮಂಚಿ, ದಾವೂದ್, ಅಶ್ರಫ್ ಸಾಲೆತ್ತೂರು, ಶಾಕೀರ್ ಅಳಕೆಮಜಲು, ಸಿ.ಎಚ್.ಅಬೂಬಕ್ಕರ್, ಹಸೈನಾರ್ ಕೋಡಪದವು, ಅಝೀಝ್ ಕೊಳ್ನಾಡು ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಯಕ್ರಮದ ಸಂಚಾಲಕ ಎ.ಬಿ.ಅಬ್ದುಲ್ಲಾ ಸ್ವಾಗತಿಸಿದರು. ಎಂ.ಎಸ್.ಮುಹಮ್ಮದ್ ಪ್ರಸ್ತಾವಿಕ ಭಾಷಣ ಮಾಡಿದರು. ಅಶ್ರಫ್ ಸವನೂರು ಕ್ರಾಂತಿ ಗೀತೆ ಹಾಡಿದರು. ನೌಫಲ್ ಕುಡ್ತಮೊಗೆರು ಕಾರ್ಯಕ್ರಮ ನಿರೂಪಿಸಿದರು.

ದೇಶ ದೇಶವಾಗಿ ಉಳಿದಿದ್ದರೆ ಅದು ಸಂವಿಧಾನದ ಮೂಲಕ. ನಾವು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿಲ್ಲ. ಸಂವಿಧಾನವನ್ನು ಉಳಿಸಲು ಬಂದಿದ್ದೇವೆ. ಸಂವಿಧಾನ ನಮ್ಮನ್ನು ನೈಜ್ಯ ಭಾರತೀಯರನ್ನಾಗಿಸುತ್ತದೆ. ಆ ಸಂವಿಧಾನಕ್ಕೆ ಅಪಾಯ ಬಂದಾಗ ನಾವು ಬೀದಿಗೆ ಬರಲೇಬೇಕಾಗುತ್ತದೆ. ನಮ್ಮ ದೇಶವನ್ನು ಮೋದಿ ಆಳುತ್ತಿಲ್ಲ. ಸಂವಿಧಾನ ಆಳುತ್ತಿದೆ. ನಾವು ರಕ್ತದಿಂದ ಭಾರತೀಯರಾಗಬೇಕು ಹೊರೆತು ಕಾಗದದಿಂದ ಅಲ್ಲ. ಹಾಗಾಗಿ ಸಿಎಎ, ಎನ್‍ಆರ್ ಸಿ, ಎನ್‍ಪಿಆರ್ ಗಳ ಅಗತ್ಯ ಈ ದೇಶಕ್ಕೆ ಇಲ್ಲ.

-ಜ್ಞಾನಪ್ರಕಾಶ್ ಸ್ವಾಮೀಜಿ,  ಮೈಸೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News