ತಲಪಾಡಿ ಟೋಲ್ ದರ ಹೆಚ್ಚಳಕ್ಕೆ ವಿರೋಧ: ಪ್ರಯಾಣಿಕರಿಗೆ ಅರ್ಧದಲ್ಲೇ ಇಳಿಯಬೇಕಾದ ಅನಿವಾರ್ಯತೆ!

Update: 2020-02-16 15:06 GMT

ಮಂಗಳೂರು, ಫೆ.16: ನಗರದಿಂದ ತಲಪಾಡಿಗೆ ಸಂಚರಿಸುವ ಖಾಸಗಿ ಬಸ್‌ಗಳಿಗೆ ಟೋಲ್‌ನಲ್ಲಿ ದಿನಕ್ಕೆ 500 ರೂ.ನಿಗದಿಪಡಿಸಿದ್ದನ್ನು ವಿರೋಧಿಸಿರುವ ಬಸ್ ಮಾಲಕರು ಕಳೆದ ಎರಡ್ಮೂರು ದಿನದಿಂದ ಮೇಲಿನ ತಲಪಾಡಿಗೆ ತೆರಳದೆ ಟೋಲ್‌ಗೇಟ್ ಎದುರೇ ಕೊನೆಯ ಸ್ಟಾಫ್ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದುಕೊಂಡ ಸ್ಥಳೀಯ ಸಂಘಟನೆಯ ಮುಖಂಡರು, ಸಾರ್ವಜನಿಕರು, ಬಸ್ ಮಾಲಕರು ಹಾಗೂ ಟೋಲ್‌ಗೇಟ್ ಅಧಿಕಾರಿಗಳ ಮಧ್ಯೆ ರವಿವಾರ ಸಂಧಾನ ಮಾತುಕತೆ ಏರ್ಪಟ್ಟರೂ ಕೂಡ ಅದು ವಿಫಲಗೊಂಡಿದೆ.

ಎರಡು ತಿಂಗಳ ಹಿಂದೆ ಟೋಲ್‌ಗೇಟ್ ಬಳಿ ಈ ಸಮಸ್ಯೆ ಎದುರಾದಾಗ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಕ್ಕಿತ್ತು. ಈ ಬಗ್ಗೆ ತಲಪಾಡಿ ಗ್ರಾಮಸಭೆಯಲ್ಲೂ ಕೂಡ ವಿಷಯ ಪ್ರಸ್ತಾಪವಾಗಿತ್ತು. ಆದರೂ ಕೂಡ ಖಾಸಗಿ ಸಿಟಿಬಸ್ಸುಗಳಿಗೆ ದುಬಾರಿ ಟೋಲ್ ಶುಲ್ಕ ವಿಧಿಸಲಾಗಿದೆ ಎಂದು ಆರೋಪಿಸಿರುವ ಬಸ್ ಮಾಲಕರು ಟೋಲ್‌ಗೇಟ್ ಮುಂದೆಯೇ ಅಂದರೆ ಕೊನೆಯ ಸ್ಟಾಫ್ ನೀಡುತ್ತಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಟೋಲ್‌ಗೇಟ್‌ನ ಆಚೆಯಿರುವ ‘ಮೇಲಿನ ತಲಪಾಡಿ’ ತಲುಪಲು ಪ್ರಯಾಣಿಕರು ಅರ್ಧ ಕಿ.ಮೀ. ನಡೆಯಬೇಕಿದೆ. ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಸಮಸ್ಯೆ ಎದುರಿಸುವಂತಾಗಿದೆ.

ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ, ತಲಪಾಡಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕರೀಂ ನಾಗತೋಟ, ಉಳ್ಳಾಲ ಪೊಲೀಸರು ಮತ್ತು ಟೋಲ್ ಅಧಿಕಾರಿಗಳ ಮಧ್ಯೆ ರವಿವಾರ ನಡೆದ ಸಂಧಾನ ಮಾತುಕತೆ ವಿಫಲವಾಗಿದೆ.

ಎರಡು ತಿಂಗಳಿನಿಂದ ಈ ಸಮಸ್ಯೆ ಇದ್ದರೂ ಇದನ್ನು ಬಗೆಹರಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಅಥವಾ ಕಂಪನಿಯವರು ಬರುತ್ತಾರೋ ಎಂದು ಕಾದು ನೋಡಿದೆವು. ಯಾರ ಸ್ಪಂದನೆಯೂ ಸಿಗದ ಕಾರಣ ನಾವೇ ಮಾತುಕತೆಗೆ ಮುಂದಾದೆವು. ಟೋಲ್ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಅಣಿಯಾಗಿದ್ದೇವೆ. ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ನೋಡಿ ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಹಾಗಾಗಿ ಈ ಪರಿಸರದ ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು, ಬಸ್ ಮಾಲಕರನ್ನು ಕರೆಸಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಿದ್ದೀಕ್ ತಲಪಾಡಿ ತಿಳಿಸಿದ್ದಾರೆ.

ಈವರೆಗೆ ಮೇಲಿನ ತಲಪಾಡಿ ತನಕ ಹೋಗಿ ಪ್ರಯಾಣಿಕರನ್ನು ಇಳಿಸಿ ಬರುತ್ತಿದ್ದರೂ ಈಗ ಟೋಲ್‌ನವರು ತಿಂಗಳಿಗೆ 40 ಸಾವಿರ ರೂ. ಶುಲ್ಕ ಪಾವತಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಕನಿಷ್ಠ ದಿನಕ್ಕೆ 500 ರೂ.ನಂತೆ ತಿಂಗಳಿಗೆ 15,000 ರೂ. ಪಾವತಿ ಮಾಡಬೇಕು ಎನ್ನುತ್ತಾರೆ. ಬಸ್‌ನವರು 4,100 ರೂ. ತಿಂಗಳಿಗೆ ಪಾವತಿಸಬೇಕು ಎಂದು ಟೋಲ್ ಅಧಿಕಾರಿಗಳು ಹಾಕಿದ ಬೋರ್ಡ್‌ನಲ್ಲೇ ಇದ್ದರೂ ಕೂಡ ಇದೀಗ ಮನ ಬಂದಂತೆ ಶುಲ್ಕ ಕೇಳುವುದು ಸರಿಯಲ್ಲ ಎಂದು ತಲಪಾಡಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕರೀಂ ನಾಗತೋಟ ತಿಳಿಸಿದ್ದಾರೆ.

ತಲಪಾಡಿ ಬಸ್ ಮಾಲಕರು ಎಷ್ಟು ಬೇಡಿಕೆ ಇಟ್ಟರೂ ಟೋಲ್ ಶುಲ್ಕ ಇಳಿಸುವ ಪ್ರಶ್ನೆಯೇ ಇಲ್ಲ. ತಿಂಗಳಿಗೆ 4,100ರೂ. ಶುಲ್ಕ ಬೋರ್ಡ್‌ನಲ್ಲಿ ಪ್ರಕಟಿಸಿರುವುದು ದಿನಕ್ಕೆ ಒಂದು ಬಾರಿ ಹೋಗಿ ಬರುವ ಘನ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ತಲಪಾಡಿ ಬಸ್ ದಿನಕ್ಕೆ 29 ಬಾರಿ ಹೋಗಿ ಬರುತ್ತಿದ್ದು, ಉತ್ತಮ ಆದಾಯವೂ ಇರುವುದರಿಂದ ಬೋರ್ಡ್‌ನಲ್ಲಿ ಪ್ರಕಟಿಸಿದ ಶುಲ್ಕ ತಲಪಾಡಿ ಬಸ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಟೋಲ್ ಅಧಿಕಾರಿ ಶಿವಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News