ಸಿಎಎ ದೇಶದ ಪ್ರಜೆಗಳ ಪೌರತ್ವ ಕಿತ್ತುಕೊಳ್ಳುವುದಿಲ್ಲ: ಸ್ವಪನ್ ದಾಸ್ ಗುಪ್ತ

Update: 2020-02-16 16:16 GMT

ಮಂಗಳೂರು, ಫೆ.16:ಪೌರತ್ವ ತಿದ್ದುಪಡಿ ಕಾಯಿದೆಯ ಮೂಲಕ ಈ ದೇಶದ ಪ್ರಜೆಗಳ ಪೌರತ್ವವನ್ನು ಕಿತ್ತುಕೊಳ್ಳುವ ಉದ್ದೇಶ ಹೊಂದಿಲ್ಲ ಎಂದು ರಾಜ್ಯಸಭಾ ಸದಸ್ಯ, ಬಲಪಂಥೀಯ ಚಿಂತಕ ಸ್ವಪನ್ ದಾಸ್ ಗುಪ್ತ ತಿಳಿಸಿದ್ದಾರೆ.

ನಗರದ ಸ್ಟೇಟ್ ಬಳಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿಂದು ಸಿಟಿಝನ್ ಫೋರಂ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಭಾಷಣ ಮತ್ತು ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ದೇಶದಲ್ಲಿ ರಾಜಕೀಯ ಪ್ರೇರಿತವಾಗಿ ಪ್ರತಿಭಟನೆಗಳು ನಡೆಯುತ್ತಿದೆ ಎಂದು ಸ್ವಪನ್ ದಾಸ್ ಆರೋಪಿಸಿದರು.

ಪ್ರಪಂಚದ ಸುಮಾರು 56 ದೇಶಗಳಲ್ಲಿ ಪೌರತ್ವ ಕಾರ್ಡ್‌ಗಳನ್ನು ಅಲ್ಲಿನ ನಾಗರಿಕರಿಗೆ ನೀಡಲಾಗಿದೆ. ಭಾರತದಲ್ಲಿಯೂ ಇದೆ ರೀತಿಯ ಪೌರತ್ವ ಕಾರ್ಡ್ಗಳನ್ನು ಇಲ್ಲಿನ ನಾಗರಿಕರಿಗೆ ವಿತರಿಸುವ ಉದ್ದೇಶವನ್ನು ಹೊಂದಿದೆ. ಇದರಿಂದ ದೇಶದೊಳಗೆ ನುಸುಳುಕೋರರನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಎನ್ ಆರ್ ಸಿ ಯ ಮೂಲಕ ಈ ದೇಶದ ಪ್ರಜೆಗಳು ಯಾರು, ಯಾರು ಈ ದೇಶದ ಪ್ರಜೆಗಳು ಅಲ್ಲ ಎನ್ನುವುದನ್ನು ತಿಳಿಯಲು ಸಾಧ್ಯವಾಗುತ್ತದೆ. ಅಸ್ಸಾಂನಲ್ಲಿ 1951ರ ಜನಸಂಖ್ಯೆಯನ್ನು ಮತ್ತು 2011ರ ಜನಸಂಖ್ಯೆಯನ್ನು ಗಮನಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶದ ವಲಸಿಗರು ಕಂಡು ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೆಶನದ ಪ್ರಕಾರ ಪೌರತ್ವ ನೋಂದಣಿ ಆರಂಭಗೊಂಡಿದೆ. ಈ ಪರಿಸ್ಥಿತಿ ದೇಶದ ಇತರ ಕಡೆ ಇಲ್ಲ. ಆದರೂ ದೇಶದ ಇತರ ಕಡೆ ಸಿಎಎ, ಎನ್ ಆರ್ ಸಿ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಪೌರತ್ವ ತಿದ್ದುಪಡಿಯ ಬಗ್ಗೆ ಹೊರಗೆ ಪ್ರತಿಭಟನೆ ಮಾಡುವವರು ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕಿತ್ತು ಎಂದು ಸ್ವಪನ್ ದಾಸ್ ಟೀಕಿಸಿದ್ದಾರೆ.

ದೇಶದಲ್ಲಿ ಟಿಬೆಟ್, ಶ್ರೀಲಂಕಾದಿಂದ ಬಂದ ನಿರಾಶ್ರಿತರಿದ್ದಾರೆ. ದೇಶದ ಪೌರತ್ವ ತಿದ್ದುಪಡಿ ಕಾಯಿದೆ ಭಾರತದಲ್ಲಿರುವ ಇತರ ದೇಶದವರಿಗೂ ತಮ್ಮ ಭವಿಷ್ಯವನ್ನುಕಂಡು ಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದು ಸ್ವಪನ್ ದಾಸ್ ಗುಪ್ತ ತಿಳಿಸಿದ್ದಾರೆ.

ಗಣೇಶ್ ಕಾರ್ಣಿಕ್ ಕಾರ್ಯಕ್ರಮ ನಿರೂಪಿಸಿದರು. ಚಿದಾನಂದ ಕೆದ್ಲಾಯ ವಂದಿಸಿದರು. ಡಾ.ಎಚ್. ಎಸ್.ಬಲ್ಲಾಳ್ ಸ್ಮರಣಿಕೆ ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News