ದವೀಂದರ್ ಸಿಂಗ್ ಬಂಧನ: ಉಗ್ರ ಸಂಘಟನೆಗೆ ಹಣ ಪೂರೈಕೆಯ ಪುರಾವೆ ಸಂಗ್ರಹಿಸಿದ ಅಧಿಕಾರಿಗಳು

Update: 2020-02-16 16:51 GMT

ಶ್ರೀನಗರ, ಫೆ.16: ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಪ್ರಯಾಣಿಸುತ್ತಿದ್ದಾಗ ಭದ್ರತಾ ಪಡೆಗಳಿಗೆ ಸಿಕ್ಕಿಬಿದ್ದಿದ್ದ ಡಿವೈಎಸ್ಪಿ ದವಿಂದರ್ ಸಿಂಗ್ ವಿಚಾರಣೆ ಸಂದರ್ಭ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಗಡಿವ್ಯಾಪಾರದ ಮೂಲಕ ಭಯೋತ್ಪಾದಕ ಸಂಘಟನೆಗಳಿಗೆ ಹಣ ಪೂರೈಸುತ್ತಿರುವುದಕ್ಕೆ ಖಚಿತ ಪುರಾವೆಯನ್ನು ಸಂಗ್ರಹಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಂಗ್‌ ಜೊತೆ ವಶಕ್ಕೆ ಪಡೆದಿದ್ದ ನಿಷೇಧಿತ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಸ್ವಘೋಷಿತ ಕಮಾಂಡರ್ ನವೀದ್ ಮುಷ್ತಾಕ್ ಅಹ್ಮದ್‌ನನ್ನು ವಿಚಾರಣೆ ನಡೆಸಿದ ಸಂದರ್ಭ ಸಂಘಟನೆಗೆ ಹಣ ಪೂರೈಕೆ ಹಾಗೂ ಪಾಕಿಸ್ತಾನದಲ್ಲಿರುವ ಸಂಘಟನೆಯ ಮುಖ್ಯಸ್ಥರೊಂದಿಗೆ ಸಂಪರ್ಕ ಸಾಧಿಸುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಹೀಗೆ ಭಯೋತ್ಪಾದಕ ಸಂಘಟನೆಗೆ ಹಣ ಪೂರೈಸುವ ಬಗ್ಗೆ ಅನಿರೀಕ್ಷಿತವಾಗಿ ಮಾಹಿತಿ ಲಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಗಿಂದ ನಡೆಯುತ್ತಿರುವ ವ್ಯಾಪಾರದ ಹಿನ್ನೆಲೆಯಲ್ಲಿ ಅಧಿಕಾರಿಗಳು 2016ರಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು ಹಾಗೂ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸಲಾಮಾಬಾದ್ ಹಾಗೂ ಜಮ್ಮುವಿನ ಪೂಂಛ್ ಜಿಲ್ಲೆಯ ಚಕನ್-ದ ಬಾಗ್‌ನಲ್ಲಿರುವ ವ್ಯಾಪಾರ ಸೌಲಭ್ಯ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದರು. ಆದರೆ ಕಳೆದ 4 ವರ್ಷಗಳ ತನಿಖೆಯ ಬಳಿಕವೂ ವ್ಯಾಪಾರಿಗಳಿಂದ ಪಡೆದ ಹಣ ಅಂತಿಮವಾಗಿ ಯಾರನ್ನು ತಲುಪುತ್ತಿದೆ ಎಂಬ ಮಾಹಿತಿ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇದೀಗ ನವೀದ್ ನೀಡಿದ ಮಾಹಿತಿಯ ಮೇರೆಗೆ ಇನ್ನೂ ಕೆಲವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗೆ ಎಲ್‌ಒಸಿ(ನಿಯಂತ್ರಣಾ ರೇಖೆ) ವ್ಯಾಪಾರ ಸಂಘಟನೆಯ ಅಧ್ಯಕ್ಷ ತನ್ವೀರ್ ಅಹ್ಮದ್ ವಾನಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು ವಿಚಾರಣೆ ಮುಂದುವರಿದಿದೆ. 2008ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ವಿಶ್ವಾಸ ವೃದ್ಧಿಯ ಕ್ರಮವಾಗಿ ಆರಂಭಿಸಲಾದ ಗಡಿ ವ್ಯಾಪಾರ ಪ್ರಕ್ರಿಯೆಯಿಂದ ಅಕ್ರಮ ಶಸ್ತ್ರಾಸ್ತ್ರ ಖರೀದಿಯಂತಹ ಕಾನೂನು ಬಾಹಿರ ಕೃತ್ಯಕ್ಕೆ ಹಣ ಪೂರೈಕೆಯಾಗುತ್ತಿದೆ ಎಂಬ ಮಾಹಿತಿಯ ಬಳಿಕ ಕಳೆದ ವರ್ಷದ ಎಪ್ರಿಲ್‌ನಲ್ಲಿ ಕೇಂದ್ರ ಸರಕಾರ ಗಡಿ ವ್ಯಾಪಾರಕ್ಕೆ ತಡೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News