ಅಂತರಂಗದ ಭಾವನೆ ಕವಿತೆಯಾಗಿ ಸೃಷ್ಠಿ: ಗುರ್ಮೆ ಸುರೇಶ್ ಶೆಟ್ಟಿ

Update: 2020-02-16 17:16 GMT

ಉಡುಪಿ, ಫೆ.16: ಸಾಹಿತ್ಯ ಎಂಬುದು ಶೂನ್ಯ ಸೃಷ್ಟಿಯಲ್ಲ. ಅದು ವಿಷಯಾ ಧಾರಿತ ವಸ್ತು. ಮನಸ್ಸು ಭಾವನೆಗಳ ತವರೂರು. ಮನುಷ್ಯನ ಅಂತರಂಗದ ಭಾವನೆಯ ತುಮುಲಗಳು ಕವಿತೆಯಾಗಿ ರೂಪುಗೊಳ್ಳುತ್ತದೆ ಎಂದು ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಉಡುಪಿ ಸುಹಾಸಂ ವತಿಯಿಂದ ಉಡುಪಿ ಕಿದಿಯೂರು ಹೋಟೆಲಿನ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಸಮಾರಂಭದಲ್ಲಿ ವೈ. ಸುಬ್ರಹ್ಮಣ್ಯ ರಾವ್ ಎಲ್ಲೂರು ಅವರ ಒಲುಮೆಯ ಕುಲುಮೆಯೊಳಗೆ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಸಮಾಜದಲ್ಲಿ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನ ಮೂಡಿಸಬೇಕಾಗಿದೆ. ಅದಕ್ಕೆ ಒಳ್ಳೆಯ ಲೇಖನಗಳು, ಸಾಹಿತಿಗಳು, ಶಿಕ್ಷಣ ತಜ್ಞರು ರೂಪುಗೊಳ್ಳಬೇಕು. ಇಂದು ಶಿಕ್ಷಣ ಮೌಲ್ಯ ಕಳೆದುಕೊಳ್ಳುತ್ತಿದೆ. ಜನರಲ್ಲಿ ಮಾನವೀಯತೆ ಮರೆಯಾಗುತ್ತಿದೆ. ರಾಜಕಾರಣದಲ್ಲಿ ತತ್ವ ಸಿದ್ಧಾಂತ ಕುಸಿಯುತ್ತಿದೆ. ಇದನ್ನು ಹೋಗಲಾಡಿಸಲು ಉತ್ತಮ ಬರಹ ಹಾಗೂ ಬರಹಗಾರರ ಅವಶ್ಯಕತೆ ಇದೆ ಎಂದರು.

ಕಾಲಘಟಕ್ಕೆ ಅನುಗುಣವಾಗಿ ಬರವಣಿಗೆಯ ವಿಷಯ ಹಾಗೂ ಶೈಲಿ ಬದಲಾಗುತ್ತದೆ. ಅದು ಅನಿವಾರ್ಯ ಕೂಡ ಆಗಿದೆ. ಹಾಗಾಗಿ ಕಾಲಕ್ಕೆ ತಕ್ಕಂತೆ ಬದಲಾಗುವ ವಿಷಯಗಳಿಗೆ ಸ್ಪಂದಿಸುವುದು ಕೂಡ ಬರಹಗಾರರ ಕರ್ತವ್ಯ ಎಂದು ಅವರು ಅಭಿಪ್ರಾಯಪಟ್ಟರು.

ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ, ಲೇಖಕಿ ಇಂದಿರಾ ಹಾಲಂಬಿ, ಲೇಖಕ ವೈ.ಸುಬ್ರಹ್ಮಣ್ಯ ರಾವ್ ಉಪಸ್ಥಿತರಿದ್ದರು. ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಎಚ್.ಗೋಪಾಲ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News