ಬಿ.ಸಿ.ರೋಡ್: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಎಸ್‍ಡಿಪಿಐ ಪ್ರತಿಭಟನೆ

Update: 2020-02-16 17:20 GMT

ಬಂಟ್ವಾಳ, ಫೆ.16: ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ಎಸ್‍ಡಿಪಿಐ ಬಂಟ್ವಾಳ ಪುರಸಭಾ ಸಮಿತಿಯಿಂದ ಬಿ.ಸಿ.ರೋಡಿನ ಕೈಕಂಬದಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಅಡುಗೆ ಅನಿಲ ಬೆಲೆ ಏರಿಕೆ ಮಹಿಳೆಯರ ಮೇಲಿನ ಪರೋಕ್ಷ ದಾಳಿಯಾಗಿದೆ. ಈಗಾಗಲೇ ಇಂಧನ ಬೆಲೆ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಳಾಗಿದ್ದು ಇದೀಗ ಅಡುಗೆ ಅನಿಲ ಬೆಲೆ ಹಿಂದೆಂದೂ ಕಂಡು ಕೇಳದಷ್ಟು ಏರಿಕೆ ಆಗಿರುವುದರಿಂದ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಪ್ರಧಾನಿ ಮೋದಿಯವರ ಭದ್ರತೆಗೆ ಪ್ರತೀ ದಿನವೊಂದಕ್ಕೆ 2 ಕೋಟಿ ರೂ. ರಷ್ಟು ಖರ್ಚು ಮಾಡಲಾಗುತ್ತಿದೆ. ಬೆಲೆ ಏರಿಕೆಯಿಂದ ಈ ದೇಶದ ಜನಸಾಮಾನ್ಯರ ಜೀವನ ಅಭದ್ರತೆಗೆ ಒಳಗಾಗಿದೆ. ಇದೇ ರೀತಿ ಮುಂದುವರಿದರೆ ಜನರು ಸರಕಾರದ ವಿರುದ್ಧ ದಂಗೆ ಏಳುವ ಕಾಲ ದೂರ ಇಲ್ಲ ಎಂದು ಅವರು ಎಚ್ಚರಿಕೆ ನೀಡಿದರು. 

ಪ್ರತಿಭಟನಾ ಸ್ಥಳದಲ್ಲಿ ಒಲೆ ಮೂಲಕ ಚಹಾ ತಯಾರಿಸಿ ಕುಡಿಯುವ ಮೂಲಕ ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. 

ಎಸ್‍ಡಿಪಿಐ ದ.ಕ. ಜಿಲ್ಲಾ ಉಪಾಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್., ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಬಂಟ್ವಾಳ ಪುರಸಭಾ ಸದಸ್ಯರಾದ ಮುನೀಶ್ ಅಲಿ, ಇದ್ರೀಶ್ ಪಿ.ಜೆ., ಬಂಟ್ವಾಳ ಪುರಸಭಾ ಸಮಿತಿ ಸದಸ್ಯ ಅಕ್ಬರ್ ಅಲಿ, ಎಸ್‍ಡಿಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲಿಕ್ ಕೊಳಕೆ, ಶಫೀಕ್ ಲೊರೆಟೆಪದವು ಮತ್ತು ಅಸ್ಕರ್ ಆಲಡ್ಕ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News