ರಾಜ್ಯಕ್ಕೆ ಮಾದರಿಯಾದ ಪುದು ಗ್ರಾಪಂ ಸಭಾಭವನ: ಗ್ರಾಮದ ಅಭಿವೃದ್ಧಿಯ ಚರ್ಚೆಗೆ ಸುಸಜ್ಜಿತ ಕೊಠಡಿ

Update: 2020-02-16 17:30 GMT

ಬಂಟ್ವಾಳ, ಫೆ.16: ತಾಲೂಕಿನ ಪುದು ಗ್ರಾಮ ಪಂಚಾಯತ್‍ನಲ್ಲಿ ನಿರ್ಮಿಸಿರುವ ನೂತನ ಸಭಾಭವನ ರಾಜ್ಯಕ್ಕೆ ಮಾದರಿಯಾದಂತಿದೆ. ಸಾಮಾನ್ಯವಾಗಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‍ಗಳ ಸಭಾಭವನಕ್ಕೆ ಹೊಂದಾಣಿಕೆ ಆಗುವ ರೀತಿಯಲ್ಲಿ ಪುದು ಗ್ರಾಮ ಪಂಚಾಯತ್‍ನ ಸಭಾಭವನವನ್ನು ನಿರ್ಮಿಸಲಾಗಿದೆ. 

ಪುದು ಗ್ರಾಮ ಬಂಟ್ವಾಳ ತಾಲೂಕಿಗೆ ಸೇರುತ್ತದೆಯಾದರೂ ಈ ಗ್ರಾಮ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ಪ್ರತಿನಿಧಿಸುವ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಶಾಸಕ ಯು.ಟಿ.ಖಾದರ್ ಹಾಗೂ ಗ್ರಾಮ ಪಂಚಾಯತ್‍ನ 16 ಲಕ್ಷ ರೂ. ಅನುದಾನದಲ್ಲಿ ಪುದು ಗ್ರಾಮ ಪಂಚಾಯತ್ ಕಟ್ಟಡದ ಮೇಲೆ ನೂತನ ಸಭಾಭವನವನ್ನು ನಿರ್ಮಿಸಲಾಗಿದೆ. 

ಗ್ರಾಮ ಪಂಚಾಯತ್‍ಗಳಲ್ಲಿ ಸಾಮಾನ್ಯವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿಯಲ್ಲೇ ಕುರ್ಚಿಗಳನ್ನು ಇಟ್ಟು ಸದಸ್ಯರು ಸೇರಿ ಸಭೆ ನಡೆಸುತ್ತಾರೆ. ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿ ವಿಸ್ತೀರ್ಣ ಕಡಿಮೆ ಇರುವುದರಿಂದ ಒಂದಕ್ಕೊಂದು ಕುರ್ಚಿಗಳು ತಾಗಿರಿಸಿ ಸಭೆ ನಡೆಸಿ ಮುಗಿಸಲಾಗುತ್ತದೆ. ಇದರಿಂದ ಗ್ರಾಮದ ಅಭಿವೃದ್ಧಿಗೆ ಆರೋಗ್ಯಕರ ಚರ್ಚೆ ನಡೆಸಲು ಅಸಾಧ್ಯವಾಗುವ ಸಂದರ್ಭಗಳೇ ಹೆಚ್ಚು. ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಹಾಗೂ ಗ್ರಾಮದ ಅಭಿವೃದ್ಧಿಯ ಬಗ್ಗೆ ಆರೋಗ್ಯಕರ ಚರ್ಚೆ ನಡೆಸಲು ಸುಸಜ್ಜಿತ ಸಭಾಭವನವನ್ನು ಪುದು ಗ್ರಾಮ ಪಂಚಾಯತ್ ನಿರ್ಮಿಸಿದೆ. 

ಪುದು ಗ್ರಾಮ ಪಂಚಾಯತ್‍ನ ಮೇಲಿನ ಅಂತಸ್ತಿನಲ್ಲಿ ವಿಶಾಲವಾದ ಕೊಠಡಿಯಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮಾದರಿಯ ಸಭಾಭವನವನ್ನು ನಿರ್ಮಿಸಲಾಗಿದೆ. ಕೊಠಡಿಯಲ್ಲಿ ಸಭೆ ನಡೆಯುವ ಸಂದರ್ಭದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಕುಳಿತುಕೊಳ್ಳಲು ಒಂದು ಅಡಿಯಷ್ಟು ಎತ್ತರದ ವೇದಿಕೆಯನ್ನು ನಿರ್ಮಿಸಲಾಗಿದೆ. ಅಲ್ಲದೆ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಟೇಬಲ್ ಮತ್ತು ಕುರ್ಚಿಗಳನ್ನೂ ಇಡಲಾಗಿದೆ. ಪ್ರತೀ ಟೇಬಲ್ ಮೂರು ಕುರ್ಚಿಗಳನ್ನು ಹೊಂದಿದ್ದು ಪ್ರತೀ ವಾರ್ಡ್‍ನ ಸದಸ್ಯರು ಒಟ್ಟಿಗೆ ಒಂದೇ ಟೇಬಲ್‍ನಲ್ಲಿ ಕುಳಿತು ತಮ್ಮ ವಾರ್ಡ್‍ನ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಲು ಅನುಕೂಲಕರವಾಗಿದೆ. ಅಲ್ಲದೆ ಪ್ರತೀ ಟೇಬಲ್‍ನಲ್ಲಿ ಮೈಕ್ ವ್ಯವಸ್ಥೆ ಮಾಡಲಾಗಿದೆ. 

ಗ್ರಾಮಕ್ಕೆ ಗ್ರಾಮ ಪಂಚಾಯತ್ ಕಟ್ಟಡ ವಿಧಾನಸೌಧ ಇದ್ದಂತೆ. ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯುವ ಸ್ಥಳ ಸದಸ್ಯರಿಗೆ ಯಾವುದೇ ಸಮಸ್ಯೆಯಾಗದಂತೆ ಸುಸಜ್ಜಿತವಾಗಿರಬೇಕು. ಹಾಗಿದ್ದಲ್ಲಿ ಮಾತ್ರ ಗ್ರಾಮದ ಅಭಿವೃದ್ಧಿಯ ಬಗ್ಗೆ ಆರೋಗ್ಯಕರ ಚರ್ಚೆ ನಡೆಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತ ಸುಸಜ್ಜಿತ ಸಭಾಭವನವನ್ನು ನಿರ್ಮಿಸಲಾಗಿದೆ. ಇದಕ್ಕೆ ಶಾಸಕ ಯು.ಟಿ.ಖಾದರ್, ಗ್ರಾಪಂನ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಈ ಸಭಾಭವನ ಇನ್ನಷ್ಟು ಕೊಡುಗೆಗಳನ್ನು ನೀಡಲಿದೆ. 
- ಉಮ್ಮರ್ ಫಾರೂಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ 

ಶಾಸಕ ಯು.ಟಿ.ಖಾದರ್ ಹಾಗೂ ಗ್ರಾಮ ಪಂಚಾಯತ್‍ನ 16 ಲಕ್ಷ ರೂ. ಅನುದಾನದಲ್ಲಿ ಹೊಸ ಸಭಾಭವನವನ್ನು ನಿರ್ಮಿಸಿ ಗ್ರಾಮದ ಜನರ ಸೇವೆಗೆ ಸಮರ್ಪಿಸಲಾಗಿದೆ. ಈ ಸಭಾಭವನದ ನಿರ್ಮಾಣ ಐತಿಹಾಸಿಕ ಕೆಲಸ ಎಂದು ಶಾಸಕ ಯು.ಟಿ.ಖಾದರ್ ಬಣ್ಣಿಸಿದ್ದಾರೆ. ಅದರಂತೆ ಈ ಸಭಾಭವನದಲ್ಲಿ ಗ್ರಾಮದ ಅಭಿವೃದ್ಧಿಯ ಬಗ್ಗೆ ಯಾವುದೇ ಸಮಸ್ಯೆ ಇಲ್ಲದೆ ಚರ್ಚೆ ನಡೆಸಲು ಸಾಧ್ಯವಾಗಲಿದೆ. ಈ ಮೂಲಕ ಗ್ರಾಮದಲ್ಲಿ ಇನ್ನಷ್ಟು ಅಅಭಿವೃದ್ಧಿ ಕೆಲಸಗಳು ನಡೆಯಲು ಸಾಧ್ಯವಾಗಲಿದೆ. 
- ರಮ್ಲಾನ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News