ಕೃತಕ ಆಹಾರ ಸೇವನೆಯಿಂದ ಅಪಾಯಕಾರಿ ರೋಗ: ಡಾ.ಖಾದರ್

Update: 2020-02-16 17:41 GMT

ಮಂಗಳೂರು, ಫೆ.16: ದೇಶದ ಸಾಂಪ್ರದಾಯಿಕ ಆಹಾರ ಪದ್ಧತಿಯಿಂದ ದೂರವಾದ ಜನರು ಕೃತಕ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿರುವುದರಿಂದ ಕೊರೊನಾ, ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗಗಳು ಜನರನ್ನು ಬಾಧಿಸಲು ಕಾರಣ ಎಂದು ಖ್ಯಾತ ಆಹಾರ ತಜ್ಞ ಡಾ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸಾವಯವ ಕೃಷಿಕ ಗ್ರಾಹಕ ಬಳಗ, ಕಲ್ಕೂರ ಪ್ರತಿಷ್ಠಾನ ವತಿಯಿಂದ ರವಿವಾರ ಬಾಳಂಭಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ‘ನೆಮ್ಮದಿಯ ಬದುಕಿಗೆ ಸಿರಿಧಾನ್ಯಗಳೇ ವರದಾನ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು.

ಕುಡಿಯುವ ಕಷಾಯ ಮತ್ತು ಕಾಷಾಯ (ಯೋಗ ಮತ್ತಿತರ ಆಚರಣೆ)ಗಳಿಂದ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ನಾವೀಗ ಅನುಸರಿಸುತ್ತಿರುವ ಆಧುನಿಕ ಆಹಾರ ವಿಧಾನ, ಕಾಫಿ, ಚಹಾ ಮತ್ತಿತರ ಆಹಾರ ಸೇವನೆಯಿಂದಾಗಿ ಅದರೊಂದಿಗೆ ಚಿಕಿತ್ಸೆ ಹೆಸರಲ್ಲಿ ತಿನ್ನುವ ಗುಳಿಗೆ, ಔಷಧಿಯಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಸಿಯುತ್ತಿದೆ. ಪ್ರತಿರೋಧಕ ಕಣಗಳನ್ನು ಸೃಷ್ಟಿಸುವ ಮೂಲಮಜ್ಜೆಯೇ ಶಕ್ತಿಗುಂದುತ್ತಿದೆ ಎಂದು ಡಾ. ಖಾದರ್ ಹೇಳಿದರು.

ಸಿರಿಧಾನ್ಯ ಸುರಕ್ಷಿತ
ಕಾಫಿ-ಟೀಯಂತಹ ಕೆಫೀನ್‌ಯುಕ್ತ ಪೇಯಗಳಿಗೆ ಜಗತ್ತು ದಾಸವಾಗಿದೆ. ಇದರಿಂದಾಗಿ ಎಷ್ಟೋ ಅಮೂಲ್ಯ ಅರಣ್ಯಗಳು ನಾಶವಾಗಿವೆ ಎಂದ ಡಾ.ಖಾದರ್ ಇವುಗಳೊಂದಿಗೆ ಸಕ್ಕರೆಯ ಲಾಬಿ ಕೂಡಾ ಪ್ರಬಲವಾಗಿದೆ. ದೇಹಕ್ಕೆ ಅತಿ ಹೆಚ್ಚು ಸಕ್ಕರೆಯನ್ನು ಸೇವಿಸುತ್ತಿದ್ದೇವೆ. ಅಕ್ಕಿ ಗೋಧಿಯಂತಹ ಧಾನ್ಯಗಳ ಸೇವನೆಯಿಂದಲೂ ಭಾರಿ ಪ್ರಮಾಣದಲ್ಲಿ ದೇಹಕ್ಕೆ ಗ್ಲುಕೋಸ್ ಸೇರಿಕೊಂಡು ಬೇಗನೆ ಸಕ್ಕರೆ ಕಾಯಿಲೆ ಬರುವಂತಾಗಿದೆ. ಇದರ ಬದಲು ಸಿರಿಧಾನ್ಯಗಳಾದ ನವಣೆ, ಊದಲು, ಅರ್ಕಗಳ ಸೇವನೆಯಿಂದ ಇಂತಹ ಪ್ರಮಾಣದಲ್ಲಿ ಗ್ಲುಕೋಸ್ ದೇಹ ಸೇರದೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ರೋಗ ನಿರೋಧಕ ಶಕ್ತಿಗೆ ಕಷಾಯ
ದೇಹದಲ್ಲಿ ಕೇವಲ 14 ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಗರಿಕೆ, ತುಳಸಿ, ಅಮೃತಬಳ್ಳಿ, ಬಿಲ್ವಪತ್ರೆ, ಹೊಂಗೆ, ಬೇವು ಹಾಗೂ ಅರಳಿ ಎಲೆಗಳ ಕಷಾಯವನ್ನು ತಲಾ ಎರಡೆರಡು ದಿನ ಕುಡಿಯುತ್ತಾ ಬಂದರೆ ಇದು ಸಾಧ್ಯ. ಮತ್ತೆ 14 ದಿನ ಇದನ್ನು ಮುಂದುವರಿಸಿದರೆ ವರ್ಷ ಕಾಲ ದೇಹದಲ್ಲಿ ಈ ಶಕ್ತಿ ಇರುತ್ತದೆ ಎಂದು ಡಾ.ಖಾದರ್ ನುಡಿದರು.

ಈ ಸಂದರ್ಭ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಾವಯವ ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣರಾವ್, ಸರಸ್ವತಿ ಸಿರಿಧಾನ್ಯ ಮಿಲ್‌ನ ಅನಂತಕೃಷ್ಣ ಉಪಸ್ಥಿತರಿದ್ದರು. ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News