ಚಿತ್ರ ವಿಮರ್ಶಕ ಕಥಿ ಮಹೇಶ್ ಮೇಲೆ ಹಲ್ಲೆ: ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

Update: 2020-02-16 18:19 GMT
ಫೋಟೊ ಕೃಪೆ: twitter.com/Mahesh__kathi

ಹೈದರಾಬಾದ್, ಫೆ. 16: ಹಿಂದೂ ದೇವರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಆರೋಪದಲ್ಲಿ ಚಿತ್ರ ವಿಮರ್ಶಕ ಕಥಿ ಮಹೇಶ್ ಮೇಲೆ ದಾಳಿ ನಡೆಸಿದ ನಾಲ್ವರು ಬಜರಂಗದಳ ಕಾರ್ಯಕರ್ತರ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘‘ಕಥಿ ಮಹೇಶ್ ಅವರು ಶುಕ್ರವಾರ ಚಿತ್ರ ವೀಕ್ಷಿಸಲು ಐಮ್ಯಾಕ್ಸ್ ಮಹಲ್‌ಗೆ ಆಗಮಿಸಿದ್ದರು. ಹಿಂದಿರುಗುವಾಗ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಕೂಡಲೇ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಕಥಿ ಮಹೇಶ್ ಅವರನ್ನು ರಕ್ಷಿಸಿದರು ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದರು’’ ಎಂದು ಸೈಫಾಬಾದ್ ಎಸಿಪಿ ವೇಣು ಗೋಪಾಲ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ನಾಲ್ವರು ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಶೈಪಾಬಾದ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ನಾಲ್ವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹಾಗೂ ಅವರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಥಿ ಮಹೇಶ್ ಅವರು ವೀಡಿಯೊವೊಂದರಲ್ಲಿ ಹಿಂದೂ ದೇವರು ಹಾಗೂ ಧರ್ಮದ ಬಗ್ಗೆ ಅವಮಾನಕರ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಥಿ ಮಹೇಶ್ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಫೆಬ್ರವರಿ 9ರಂದು ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News