ಲೈಂಗಿಕ ದೌರ್ಜನ್ಯ ಸಂತ್ರಸ್ಥೆಯ ಕುಟುಂಬಕ್ಕೆ ರಕ್ಷಣೆ ನೀಡಲು ಮನವಿ

Update: 2020-02-16 18:47 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಬಾಲಕಿಯೋರ್ವಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿದ್ದ  ರವಿ ನಾಯ್ಕ ಎಂಬಾತನ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆದರೆ ಇನ್ನೂ ನ್ಯಾಯಾಲಯಕ್ಕೆ ಹಾಜರಾಗದ ಈ ಅಪರಾಧಿಯು ಸಂತ್ರಸ್ಥ ಬಾಲಕಿಯ ಕುಟುಂಬಕ್ಕೆ ತೊಂದರೆಯೆಸಗುವ ಸಾಧ್ಯತೆ ಇದೆ. ಆದ್ದರಿಂದ ಆಕೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು 'ನಮ್ಮೂರು- ನೆಕ್ಕಿಲಾಡಿ' ಸಂಸ್ಥೆಯು ಉಪ್ಪಿನಂಗಡಿ ಪೊಲೀಸರಿಗೆ ಮನವಿ ಸಲ್ಲಿಸಿದೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು ಹಾಗೂ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕರಿಗೆ ಠಾಣಾ ಎಎಸ್‍ಐ ಯೊಗೀಂದ್ರ ಅವರ ಮೂಲಕ ಮನವಿ ನೀಡಿದ `ನಮ್ಮೂರು- ನೆಕ್ಕಿಲಾಡಿ' ಸಂಸ್ಥೆಯ ನಿಯೋಗವು, 34 ನೆಕ್ಕಿಲಾಡಿಯಲ್ಲಿ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ 34 ನೆಕ್ಕಿಲಾಡಿಯ ತಾಳೆಹಿತ್ಲು ನಿವಾಸಿ ರವಿ ನಾಯ್ಕ ಎಂಬಾತನ ಮೇಲೆ 2016ರ ಅಕ್ಟೋಬರ್ 21ರಂದು ಉಪ್ಪಿನಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದೀಗ ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಪುತ್ತೂರು ಜಿಲ್ಲಾ ನ್ಯಾಯಾಲಯವು ಆರೋಪಿ ರವಿ ನಾಯ್ಕ ತಪ್ಪಿತಸ್ಥ ಎಂದು ಫೆ.14ರಂದು ತೀರ್ಪು ನೀಡಿದೆ. ಅಲ್ಲದೇ, ಅಪರಾಧಿಯು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಹಾಜರುಪಡಿಸುವಂತೆ ನ್ಯಾಯಾಲಯ ವಾರಂಟ್ ಜಾರಿಗೊಳಿಸಿ ಉಪ್ಪಿನಂಗಡಿ ಪೊಲೀಸರಿಗೆ ಆದೇಶಿಸಿದೆ. ಆದರೆ ಈಗ ಈತ ಪೊಲೀಸರಿಗೂ ಸಿಗದೇ ತಲೆಮರೆಸಿಕೊಂಡಿದ್ದಾನೆ. ಈತ ದ್ವೇಷ ಭಾವನೆಯಿಂದ ಲೈಂಗಿಕ ದೌರ್ಜನ್ಯ ಸಂತ್ರಸ್ಥೆಯ ಕುಟುಂಬಕ್ಕೆ ತೊಂದರೆಯೆಸಗುವ ಸಾಧ್ಯತೆಯಿದೆ. ಆದ್ದರಿಂದ ಇವರ ಕುಟುಂಬಕ್ಕೆ ಪೊಲೀಸರು ಸಂಪೂರ್ಣ ರಕ್ಷಣೆ ನೀಡಬೇಕು ಹಾಗೂ ಅಪರಾಧಿ ರವಿ ನಾಯ್ಕನನ್ನು ಶೀಘ್ರ ಬಂಧಿಸಿ ಕಾನೂನಿನಡಿ ಶಿಕ್ಷೆಗೊಳಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದೆ.

ಮನವಿ ನೀಡಿದ ನಿಯೋಗದಲ್ಲಿ 'ನಮ್ಮೂರು- ನೆಕ್ಕಿಲಾಡಿ' ಸ್ಥಾಪಕಾಧ್ಯಕ್ಷ ಜತೀಂದ್ರ ಶೆಟ್ಟಿ, ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್, ಕಾರ್ಯದರ್ಶಿ ಅನಿ ಮಿನೇಜಸ್, ಪದಾಧಿಕಾರಿಗಳಾದ ಅಝೀಝ್ ಪಿ.ಟಿ., ಅಮಿತಾ ಹರೀಶ್, ಶಬೀರ್ ನೆಕ್ಕಿಲಾಡಿ, ಅಶ್ರಫ್ ನೆಕ್ಕಿಲಾಡಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News