ಮಂಗಳೂರು: ಸಾಮಾಜಿಕ ಹೋರಾಟಗಾರನ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ

Update: 2020-02-17 04:20 GMT

ಮಂಗಳೂರು, ಫೆ.17: ಸಾಮಾಜಿಕ‌ ಹೋರಾಟಗಾರ ಮತ್ತು‌ ಪಿಯುಸಿಎಲ್ ಸಂಘಟನೆಯ ದ.ಕ. ಜಿಲ್ಲಾ ಉಪಾಧ್ಯಕ್ಷ ಮೆಲ್ವಿಲ್ ಪಿಂಟೋ ಅವರ ಮೇಲೆ ಇಬ್ಬರು ಹಲ್ಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ‌ ಫಳ್ನೀರ್ ರಸ್ತೆಯಲ್ಲಿ ಮೆಲ್ವಿಲ್ ಪಿಂಟೋ ಎಸ್‌ಟಿಡಿ ಬೂತ್ ಹೊಂದಿದ್ದಾರೆ. ಫೆ.13ರಂದು ಮುಂಜಾನೆ ಸುಮಾರು 5:30ಕ್ಕೆ‌ ಮೆಲ್ವಿಲ್ ತನ್ನ ಬೂತ್‌ನಲ್ಲಿದ್ದಾಗ ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು‌ ಯುವಕರು ವಿನಾಕಾರಣ ಮೆಲ್ವಿಲ್‌ ಪಿಂಟೋ ಅವರನ್ನು ‌ಮಾತಿಗೆಳೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದರೆನ್ನಲಾಗಿದೆ. ಬಳಿಕ ಮೆಲ್ವಿಲ್ ಪಿಂಟೋ ಅವರ ತಲೆಗೆ ಸೋಡಾ ಬಾಟಲಿಯಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಧಾವಿಸಿ ಬಂದ ಪೊಲೀಸರು ಮೆಲ್ವಿಲ್ ಪಿಂಟೋ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಮೆಲ್ವಿಲ್ ಪಿಂಟೋ ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಪೊಲೀಸರು ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಆರೋಪಿಗಳ ಚಹರೆ ಗುರುತು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಮೆಲ್ವಿಲ್ ಪಿಂಟೋ ಈ ಹಿಂದೆ ಪೊಲೀಸ್ ದೌರ್ಜನ್ಯ ಸಹಿತ ಅನ್ಯಾಯದ ವಿರುದ್ಧ ಪ್ರಬಲ ಹೋರಾಟಗೈದು ಗಮನ ಸೆಳೆದಿದ್ದರು. ಪ್ರಕರಣವೊಂದಕ್ಕೆ ಸಂಬಂಧಿಸಿ ಹಿರಿಯ ಪೊಲೀಸ್ ಅಧಿಕಾರಿ ಕೆಂಪಯ್ಯ ವಿರುದ್ದ ಕೋರ್ಟ್ ಮೆಟ್ಟಲೇರಿದ್ದರು.‌ ಅದೀಗಲೂ ಕೋರ್ಟ್‌ನಲ್ಲಿ ಬಾಕಿ ಇದೆ. ಈ ಹಿಂದೆಯೂ ಮೆಲ್ವಿಲ್ ಪಿಂಟೋಗೆ ಇದೇ ಎಸ್‌ಟಿಡಿ ಬೂತ್‌ನಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News