ತಮ್ಮನ್ನು ಸೇರಿಸಿಕೊಳ್ಳದಿದ್ದರೆ ಪ್ರತ್ಯೇಕ ಅಬ್ಬಕ ಉತ್ಸವ: ದ.ಕ. ಜಿಲ್ಲಾಡಳಿತಕ್ಕೆ ಅಬ್ಬಕ್ಕ ಉತ್ಸವ ಸಮಿತಿ ಸವಾಲು

Update: 2020-02-17 09:24 GMT

ಮಂಗಳೂರು, ಫೆ. 17: ದ.ಕ. ಜಿಲ್ಲಾಡಳಿತದ ವತಿಯಿಂದ ನಡೆಸಲಾಗುವ ಭಾರತದ ಪ್ರಥಮ ಸ್ವಾತಂತ್ರ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ಸಮಿತಿಯ ಹೆಸರನ್ನು ಸೇರ್ಪಡೆಗೊಳಿಸಬೇಕು. ಇಲ್ಲವಾದಲ್ಲಿ ಎಪ್ರಿಲ್‌ನಲ್ಲಿ 18 ಮತ್ತು 19ರಂದು ಸಮಿತಿ ವತಿಯಿಂದ ಪ್ರತ್ಯೇಕ ಸಾರ್ವಜನಿಕ ಅಬ್ಬಕ್ಕ ಉತ್ಸವ ನಡೆಸಲಾಗುವುದು ಎಂದು ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸವಾಲೊಡ್ಡಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಮಿತಿಯ ಸ್ವಾಗತಾಧ್ಯಕ್ಷ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಪ್ರಸಕ್ತ ವರ್ಷದ ಉತಸವದ ಬಗ್ಗೆ ಜಿಲ್ಲಾಧಿಕಾರಿಯವರು ಖುದ್ದು ಸರಕಾರಕ್ಕೆ ಬರೆದ ಪತ್ರದಲ್ಲಿ ಅಧಿಕಾರೇತರ ವೃಂದವನ್ನು ಹೊರತುಪಡಿಸಿ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದ್ದರೂ 120 ಮಂದಿಯ ಹೆಸರನ್ನು ಯಾವುದೇ ಮಾನದಂಡ ಇಲ್ಲದೆ ಸೇರಿಸಿ ಜಿಲ್ಲಾ ಸಮಿತಿಯನ್ನು ರಚಿಸಿದ್ದಾರೆ ಎಂದು ಆಕ್ಷೇಪಿಸಿದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕಳೆದೆರಡು ವರ್ಷಗಳಿಂದ ಇಲ್ಲದಿರುವುದರಿಂದ ಜನರು ಕೂಡಾ ಸ್ಪಂದಿಸುತ್ತಿಲ್ಲ. 2008ರಿಂದ 2017ರವರೆಗೆ ಈ ಉತ್ಸವವನ್ನು ಉಳ್ಳಾಲದ ಸಮಿತಿ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು ಎಂದು ಅವರು ಹೇಳಿದರು.

ಈಡೇರದ ಬೇಡಿಕೆಗಳು

ಎಂಟು ವರ್ಷದ ಮೊದಲು ತೊಕ್ಕೊಟ್ಟಿನ ಬಸ್ಸು ನಿಲ್ದಾಣದ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪ್ರಯತ್ನದಿಂದಾಗಿ ಅಬ್ಬಕ್ಕ ಭವನಕ್ಕೆ ಅನುದಾನ ನೀಡಿದ್ದರೂ ಭವನ ಅಥವಾ ಅಬ್ಬಕ್ಕ ಗಡಿ ಭವನ ನಿಮಾರ್ಣವಾಗಿಲ್ಲ. ಈ ಬಗ್ಗೆ ಸಮಿತಿಯು ಮುಖ್ಯಮಂತ್ರಿ, ಸಚಿವರು, ಶಾಸಕರು, ಜಿಲ್ಲಾಧಿಕಾರಿಗೆ, ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ಭವನ ನಿರ್ಮಾಣಗೊಂಡಿಲ್ಲ ಎಂದು ಅವರು ಆಕ್ಷೇಪಿಸಿದರು.

2015ರಲ್ಲಿ ಸಮಿತಿಯ ಮನವಿ ಮೇರೆಗೆ ವಿಶ್ವವಿದ್ಯಾನಿಲಯದಲ್ಲಿ ಅಬ್ಬಕ್ಕ ಅಧ್ಯಯನ ಪೀಠ ಸ್ಥಾಪಿಸಲು ಅನುಮೋದನೆ ನೀಡಲಾಗಿತ್ತು. ಆದರೆ ಅನುದಾನದ ಕೊರತೆಯಿಂದಾಗಿ ಅಧ್ಯಯನ ಪೀಠ ಇನ್ನೂ ಆರಂಭವಾಗಿಲ್ಲ. ಇತ್ತೀಚೆಗೆ ಉನ್ನತ ಶಿಕ್ಷಣ ಸಚವರು ಹಾಗೂ ದ.. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ, ಬಜೆಟ್‌ನಲ್ಲಿ 2 ಕೋಟಿ ರೂ. ಅನುದಾನ ಮೀಸಲಿಡುವಂತೆ ಒತ್ತಾಯಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬುದಾಗಿ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರ, ರಾಜ್ಯ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದವರು ಹೇಳಿದರು.

ರಾಣಿ ಹೆಸರಿನಲ್ಲಿ ಶಾಶ್ವತ ಸ್ಮತಿ ಮಂದಿರ ಸ್ಥಾಪನೆ, ಉಳ್ಳಾಲ- ಸೋಮೇಶ್ವರಗಳನ್ನು ಸ್ಮರಣೀಯ ವ್ಯವಸ್ಥಿತ ಪ್ರವಾಸಿ ಕೇಂದ್ರವಾಗಿ ಮಾಡುವುದು, ಉಳ್ಳಾಲದಲ್ಲಿ ಅಬ್ಬಕ್ಕಳ ಹೆಸರಿನ ಸ್ಮಾರಕ ಭವನ, ಅಬ್ಬಕ್ಕ ಮ್ಯೂಸಿಯಂ, ಥೀಮ್ ಪಾರ್ಕ್, ಜಿಲ್ಲಾಧಿಕಾರಿ ಕಚೇರಿ ಎದುರು ಅಬ್ಬಕ್ಕನ ಪ್ರತಿಮೆ, ನವ ಮಂಗಳೂರು ಬಂದರಿಗೆ ಅಬ್ಬಕ್ಕನ ನಾಮಕರಣ, ದೆಹಲಿ- ಬೆಂಗಳೂರು- ಮಂಗಳೂರಿನ ಒಂದು ರಸ್ತೆಗೆ ಅಬ್ಬಕ್ಕ ರಸ್ತೆ ನಾಮಕರಣ, ಮಂಗಳೂರಿನಿಂದ ಪ್ರಾರಂಭವಾಗುವ ರೈಲಿಗೆ ಅಬ್ಬಕ್ಕ ಎಕ್ಸ್‌ಪ್ರೆಸ್ ಹೆಸರಿಡುವುದು, ಅಬ್ಬಕ್ಕಳ ವಿಷಯವನ್ನು ಶಾಲಾ ಪಠ್ಯ ಪುಸ್ತಕದಲ್ಲಿ ಅಳವಡಿಸುವುದು ಮೊದಲಾದ ಬೇಡಿಕೆಗಳನ್ನು ಕೂಡಾ ತಾವು ಸರಕಾರಕ್ಕೆ ಮಾಡುತ್ತಿರುವುದಾಗಿ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೌರವ ಉಪಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಮಾಜಿ ಅಧ್ಯಕ್ಷ ದಿನಕರ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಡಿ.ಎನ್. ರಾಘವ, ಸುಹಾಸಿನಿ ಮತ್ತಿತರರು ಉಪಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News