ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಡ್‌ಎಕ್ಸ್‌ಎಸ್‌ಜೆಇಸಿ ಕಾರ್ಯಕ್ರಮ

Update: 2020-02-17 09:26 GMT

ಮಂಗಳೂರು, ಫೆ.17: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) ವಿದ್ಯಾರ್ಥಿಗಳು ರವಿವಾರ ಟೆಡ್‌ಎಕ್ಸ್‌ಎಸ್‌ಜೆಇಸಿ ಮೊತ್ತಮೊದಲ ಆವೃತ್ತಿಯನ್ನು ಆಯೋಜಿಸಿದ್ದರು.

ಕಾಲೇಜಿನ ಪ್ರಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ವಾಗ್ಮಿಗಳು ಮತ್ತು ಪ್ರದರ್ಶಕರ ಜೊತೆಗೆ ಕಾಲೇಜಿನ ನಿರ್ದೇಶಕ ವಂ ವಿಲ್ಫ್ರೆಡ್ ಪ್ರಕಾಶ್ ಡಿಸೋಜ, ಸಹಾಯಕ ನಿರ್ದೇಶಕ ವಂ.ರೋಹಿತ್ ಡಿಕೋಸ್ಟ ಮತ್ತು ವಂ.ಅಲ್ವಿನ್ ರಿಚರ್ಡ್ ಡಿಸೋಜ, ಪ್ರಾಂಶುಪಾಲ ಡಾ.ರಿಯೊ ಡಿಸೋಜ, ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಕೇಶ್ ಲೋಬೊ ಜೊತೆಗೂಡಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದ ಪ್ರಾಧ್ಯಾಪಕ ಸಂಯೋಜಕರಾದ ಡಾ.ಬಿನು ಕೆ.ಜಿ., ಟೆಡ್‌ಎಕ್ಸ್‌ಎಸ್‌ಜೆಇಸಿಯ ಪರವಾನಿಗೆ ಪಡೆದ ಪ್ರಮುಖ ಸಂಘಟಕಿ ಕ್ರಿಸ್ಟಲ್ ಡಿಸೋಜ, ಸಹ-ಸಂಘಟಕ ವರ್ನನ್ ಸೆರಾವೋ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಎಲ್ಲಾ ವಾಗ್ಮಿಗಳು ಮತ್ತು ಪ್ರದರ್ಶಕರು ಕಾಲೇಜಿನ ಹಸಿರು ಉಪಕ್ರಮದ ಅಂಗವಾಗಿ ಕ್ಯಾಂಪಸ್‌ನಲ್ಲಿ ಸಸಿಗಳನ್ನು ನೆಟ್ಟರು.

ಲವ್ ಕಾಂಕರ್ಸ್ ಆಲ್ ಎಂಬ ಥೀಮ್ ಅನ್ನು ಸಂಕೇತಿಸುವ ಸೃಜನಶೀಲ ಪ್ರದರ್ಶನಗಳನ್ನೊಳಗೊಂಡ ವಿದ್ಯಾರ್ಥಿಗಳ ಒಂದು ವಿಶಿಷ್ಟ ಪ್ರಯತ್ನವಾದ ಕಾರಿಡಾರ್ ಆಫ್ ಲವ್ ನೆರೆದವರ ಮನಸೂರೆಗೊಂಡಿತು.

ಟೆಡ್‌ಎಕ್ಸ್‌ಎಸ್‌ಜೆಇಸಿಯಲ್ಲಿ ಹೆಸರಾಂತ ವಾಗ್ಮಿಗಳಾದ ಸಾಮಾಜಿಕ ಕಾರ್ಯಕರ್ತೆ ಮತ್ತು ವೈಟ್ ಡವ್ಸ್ ಎನ್.ಜಿ.ಒ ಸ್ಥಾಪಕಿ ಕೊರಿನ್ ರಸ್ಕಿನ್ಹಾ, ಪದ್ಮಶ್ರೀ ಪುರಸ್ಕೃತ ಇಂಜಿನಿಯರ್ ಗಿರೀಶ್ ಭಾರದ್ವಾಜ್, ಕತೆಗಾರ್ತಿ, ಯುವ ಕಾರ್ಯಕರ್ತೆ, ಭಾಷಣಗಾರ್ತಿ ರಿಯಾ ಶರ್ಮಾ, ಇಂಜಿನಿಯರ್ ಮತ್ತು ಪ್ರಕೃತಿ ಉತ್ಸಾಹಿ ಓಂಕಾರ್ ಪೈ, ವಿಶ್ವದಾಖಲೆ ಹೊಂದಿರುವ ಭಾರತೀಯ ಪೈಲಟ್ ಆರೋಹಿ ಪಂಡಿತ್, ಪರ್ವತಾರೋಹಿ ವೈಷಾಕ್ ಜೆ.ಪಿ., ಶಿಕ್ಷಕಿ ಮತ್ತು ವಿಜ್ಞಾನಿ ಡಾ. ಸ್ಮಿತಾ ಹೆಗ್ಡೆ, ಅಭಿರಾಜ್ ರಾಜಾಧ್ಯಾಕ್ಷ ಹಾಗೂ ನಿಯತಿ ಮಾವಿನಕುರ್ವೆ ತಮ್ಮ ಜೀವನ ಅನುಭವಗಳು ಮತ್ತು ಬೌದ್ಧಿಕ ಒಳನೋಟಗಳನ್ನು ಸಭಿಕರ ಮುಂದೆ ಬಿಚ್ಚಿಟ್ಟರು.

ಇವರಲ್ಲದೆ ಯಕ್ಷಗಾನ ಕಲಾವಿದರಾದ ವಿದುಶಿ ಮಹಿಮಾ ಎಸ್. ರಾವ್ ಮತ್ತು ತಂಡ, ಒನ್ ಮ್ಯಾನ್ ಬ್ಯಾಂಡ್ ನ ಗ್ಲಾಡ್ಸನ್ ಪೀಟರ್, ರಂಗಭೂಮಿ ಕಲಾವಿದ ಪ್ರಿತೇಶ್ ಭಂಡಾರಿ ಮತ್ತು ತಂಡ, ಭರತನಾಟ್ಯ ಕಲಾವಿದರಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಅವರ ಮನಮೋಹಕ ಪ್ರದರ್ಶನಗಳು ನೆರೆದವರ ಮನರಂಜಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News