ಹಿಂದೂ-ಮುಸ್ಲಿಂ-ಸಿಖ್ಖರಿಂದ ಸಿಎಎ ವಿರುದ್ಧ ಬೃಹತ್ ಪ್ರತಿಭಟನೆ

Update: 2020-02-17 10:47 GMT

ಅಮೃತಸರ್ : ಪಂಜಾಬ್‍ನ  ಸಂಗ್ರೂರ್ ಜಿಲ್ಲೆಯ ಮಲೇರ್‍ ಕೋಟ್ಲಾ ಎಂಬಲ್ಲಿ ರವಿವಾರ ಪೌರತ್ವ ಕಾಯಿದೆ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಂಜಾಬಿ ಮುಸ್ಲಿಂ ಮಹಿಳೆಯರ ಸಹಿತ ಸಾವಿರಾರು ಜನರು ಪಾಲ್ಗೊಂಡರು. ಪಂಜಾಬ್ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಪ್ರತಿಭಟನಾಕಾರರು ದಾನಾ ಮಂಡಿಯಲ್ಲಿ ಜತೆಗೂಡಿ ಪ್ರತಿಭಟನೆ ನಡೆಸಿದರು.

``ಅಗತ್ಯವುಳ್ಳವರಿಗೆ ಒಂದು ಪುಸ್ತಕ ದಾನ ಮಾಡಿ, ವಿದ್ಯಾರ್ಥಿಯ ಹೆಸರು ಅಮಿತ್ ಶಾ, ಪುಸ್ತಕ- ಭಾರತದ ಸಂವಿಧಾನ'' ಎಂದು ಪ್ರತಿಭಟನಾಕಾರರೊಬ್ಬರು ಹಿಡಿದಿದ್ದ ಪೋಸ್ಟರ್‍ನಲ್ಲಿ ಬರೆಯಲಾಗಿರುವುದು ಸಾಕಷ್ಟು ಗಮನ ಸೆಳೆದಿತ್ತು.

ಹಿರಿಯ ವಕೀಲ, ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಈ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ``ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬಂದಾಗ ನಿಮ್ಮ ಪೌರತ್ವ ಸಾಬೀತುಪಡಿಸುವಂತಹ ಯಾವುದೇ ದಾಖಲೆಗಳನ್ನು ನೀಡಬೇಡಿ. ನಾನು ಕೂಡ ದಾಖಲೆ ತೋರಿಸುವುದಿಲ್ಲ, ನನ್ನನ್ನು ಮುಸ್ಲಿಂ ಎಂದು ಘೋಷಿಸಿಕೊಳ್ಳುತ್ತೇನೆ, ಅವರು ನನ್ನನ್ನು ಬಂಧಿಸಲಿ'' ಎಂದು ಅವರು ಹೇಳಿದಾಗ ಪ್ರತಿಭಟನಾಕಾರರು ಭಾರೀ ಕರತಾಡನಗೈದರು.

``ಹಿಂದು, ಮುಸ್ಲಿಂ, ಸಿಖ್, ಇಸಾಯಿ, ಆಪಸ್ ಮೇ ಹೈ ಬೆಹೆನ್ ಭಾಯಿ,'' ಎಂದು ಅವರು ಹೇಳಿದಾಗ ಪ್ರತಿಭಟನಾಕಾರರೂ ಅವರ ಜತೆಗೂಡಿದರು. ``ನಮ್ಮ ಮುಸ್ಲಿಂ ಸೋದರಿಯರಿಂದಾಗಿ ದೇಶವ್ಯಾಪಿ ಪ್ರತಿಭಟನೆಗಳು ಯಶಸ್ವಿಯಾಗಿವೆ,'' ಎಂದು ಅವರು ಹೇಳಿದರು.

ಫೆಬ್ರವರಿ 24ರಿಂದ 29ರ ತನಕ ಪ್ರತಿಭಟನೆಗಳು ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿವೆ ಎಂದು ಈ ಸಂದರ್ಭ ಮಾತನಾಡಿದ ಪಂಜಾಬ್ ಖೇತ್ ಯೂನಿಯನ್‍ನ ಲಚ್ಮನ್ ಸಿಂಗ್ ಸೆವೆವಾಲ ಹೇಳಿದರು.

ಭಗತ್ ಸಿಂಗ್ ಸೋದರಳಿಯ ಪ್ರೊ ಜಗಮೋಹನ್ ಸಿಂಗ್ ಮಾತನಾಡುತ್ತಾ ``ಕಾನೂನು  ಹಾಗೂ ಸಂವಿಧಾನ ಉಲ್ಲಂಘನೆಗೈದವರನ್ನು ಶಿಕ್ಷಿಸುವುದು ಸರಕಾರದ ಕರ್ತವ್ಯ,. ಆದರೆ ನಾವು ನೋಡುತ್ತಿರುವುದು ಸಂಪೂರ್ಣ ತದ್ವಿರುದ್ಧ. ದೇಶದ ಸಂವಿಧಾನಕ್ಕೆ ಆಡಳಿತದಲ್ಲಿರುವವರೇ  ಹಾನಿಯುಂಟು ಮಾಡುತ್ತಿದ್ದಾರೆ ಹಾಗೂ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ,''ಎಂದು ಹೇಳಿದರು.

ಭಾರತೀಯ ಕಿಸಾನ್ ಯೂನಿಯನ್ (ಏಕತಾ-ಉಗ್ರಾಹನ್), ಪಂಜಾಬ್ ಸ್ಟೂಡೆಂಟ್ಸ್ ಯೂನಿಯನ್ -ಲಾಲ್ಕರ್, ಪಂಜಾಬ್ ಲೋಕ್ ಮೋರ್ಚಾ, ನೌಜವಾನ್ ಭಾರತ್ ಸಭಾ, ಪಂಜಾಬ್ ಖೇತ್ ಮಜ್ದೂರ್ ಯೂನಿಯನ್ ಮುಂತಾದ ಸಂಘಟನೆಗಳು ಈ ಪ್ರತಿಭಟನೆಯನ್ನು ಆಯೋಜಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News