×
Ad

ಮಂಗಳೂರು: ಸರಣಿ ಹಂತಕ ಸಯನೈಡ್ ಮೋಹನ್‌ಗೆ ಜೀವಾವಧಿ ಶಿಕ್ಷೆ

Update: 2020-02-17 19:46 IST

ಮಂಗಳೂರು, ಫೆ.17: ಕಾಸರಗೋಡಿನ ಬದಿಯಡ್ಕ ಠಾಣೆ ವ್ಯಾಪ್ತಿಯ ಕೊಳ್ತಾಜೆಪಾದೆ ಗ್ರಾಮದ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಬಳಿಕ ಸಯನೈಡ್ ನೀಡಿ ಹತ್ಯೆ ಮಾಡಿದ ಆರೋಪದ ಪ್ರಕರಣದಲ್ಲಿ ಸರಣಿ ಯುವತಿಯರ ಹಂತಕ ಖ್ಯಾತಿಯ ಸಯನೈಡ್ ಮೋಹನ್‌ ಕುಮಾರ್‌ಗೆ ಜೀವಾವಧಿ ಶಿಕ್ಷೆ ಮತ್ತು 55,000 ರೂ. ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಈ ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ ಎಂಬುದಾಗಿ ಫೆ.11ರಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಇದೀಗ ಫೆ.17ರಂದು ಆರೋಪಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶೆ ಸಯೀದುನ್ನಿಸಾ ಪ್ರಕಟಿಸಿದರು.

ಶಿಕ್ಷೆಯ ವಿವರ

ಐಪಿಸಿ ಸೆ.302 (ಕೊಲೆ ಅಪರಾಧ)ರ ಅಡಿ ಜೀವಾವಧಿ ಶಿಕ್ಷೆ ಮತ್ತು 25,000 ರೂ.ದಂಡ, 366 (ಅಪಹರಣ) ರ ಅಡಿ 10 ವರ್ಷ ಕಠಿಣ ಶಿಕ್ಷೆ ಮತ್ತು 5000 ರೂ. ದಂಡ, 376 (ಅತ್ಯಾಚಾರ)ರ ಅಡಿ ಏಳು ವರ್ಷ ಕಠಿಣ ಸಜೆ ಮತ್ತು 5000 ರೂ. ದಂಡ, 328ರ ಅಡಿ ವಿಷ ಪದಾರ್ಥ (ಸಯನೈಡ್) ಉಣಿಸಿದ ಅಪರಾಧಕ್ಕೆ 10 ವರ್ಷ ಕಠಿಣ ಶಿಕ್ಷೆ ಮತ್ತು 5000 ರೂ. ದಂಡ, 392 (ಚಿನ್ನಾಭರಣ ಸುಲಿಗೆ)ರ ಅಡಿ ಐದು ವರ್ಷ ಕಠಿಣ ಸಜೆ ಮತ್ತು 5000 ರೂ. ದಂಡ, 394ರ ಪ್ರಕಾರ ವಿಷ ಉಣಿಸಿ ಸುಲಿಗೆ ಮಾಡಿದ ಅಪರಾಧಕ್ಕೆ 10 ವರ್ಷ ಕಠಿಣ ಶಿಕ್ಷೆ ಮತ್ತು 5,000 ರೂ. ದಂಡ, 417(ವಂಚನೆ)ರ ಪ್ರಕಾರ ಒಂದು ವರ್ಷ ಕಠಿಣ ಶಿಕ್ಷೆ, 201 (ಸಾಕ್ಷ್ಯ ನಾಶ)ರ ಪ್ರಕಾರ ಏಳು ವರ್ಷ ಕಠಿಣ ಸಜೆ ಮತ್ತು 5,000 ರೂ. ದಂಡ ಶಿಕ್ಷೆಯನ್ನು ವಿಧಿಸಲಾಗಿದೆ. ಇದು ಸಯನೈಡ್ ಮೋಹನ್‌ನ 19ನೇ ಪ್ರಕರಣವಾಗಿದ್ದು, ಇನ್ನು 1 ಪ್ರಕರಣ (ಕಾಸರಗೋಡಿನ ಕುಂಟಾರಿನ ಯುವತಿಯ ಕೊಲೆ) ವಿಚಾರಣೆಗೆ ಬಾಕಿ ಇದೆ.

ಪ್ರಕರಣ ಹಿನ್ನೆಲೆ

ಕಾಸರಗೋಡಿನ ಕೊಳ್ತಾಜೆಪಾದೆ ಗ್ರಾಮದ 23 ವರ್ಷ ಪ್ರಾಯದ ಬೀಡಿ ಕಟ್ಟುತ್ತಿದ್ದ ಹಾಗೂ ಬದಿಯಡ್ಕ ಕ್ಯಾಂಪ್ಕೊ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ 2006ರಲ್ಲಿ ತನ್ನ ಸಂಬಂಧಿಕರ ಮದುವೆಗೆ ತೆರಳಿದ್ದಳು. ಅಲ್ಲಿ ಮೋಹನ್‌ನ ಪರಿಚಯ ಆಗಿತ್ತು. ಆತ ತನ್ನನ್ನು ಶಿಕ್ಷಕ ಹಾಗೂ ಆಕೆಯದ್ದೇ ಜಾತಿಯವನು ಎಂದು ಪರಿಚಯಿಸಿದ್ದನು. ಮದುವೆಯ ಬಗ್ಗೆ ಮಾತುಕತೆ ನಡೆದು ಆತ ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿ ಒಂದು ವಾರದೊಳಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದನು.

ಬಳಿಕ 2006ರ ಜೂನ್ 3ರಂದು ಯುವತಿ ತಾನು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದಳು. ಮೋಹನ್ ಆಕೆಯನ್ನು ಪುತ್ತೂರಿನಿಂದ ಬಸ್‌ನಲ್ಲಿ ಮೈಸೂರಿನ ಲಾಡ್ಜ್‌ಗೆ ಕರೆದೊಯ್ದು ಅಲ್ಲಿ ಒಂದು ರಾತ್ರಿ ಇದ್ದು ಆಕೆಯನ್ನು ಅತ್ಯಾಚಾರಗೈದಿದ್ದನು. ಮರುದಿನ ಪೂಜೆಯ ನೆಪ ಹೇಳಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕರೆದೊಯ್ದು ಗರ್ಭಪಾತದ ಮಾತ್ರೆ ಎಂದು ಹೇಳಿ ಸಯನೈಡ್ ನೀಡಿದ್ದನು. ಆಕೆ ಟಾಯ್ಲೆಟ್‌ಗೆ ಹೋಗಿ ಅದನ್ನು ಸೇವಿಸಿ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಮೈಸೂರಿನ ಲಷ್ಕರ್ ಮೊಹಲ್ಲಾ ಪೊಲೀಸ್ ಠಾಣೆಯ ಬಸವರಾಜ್ ಎಂಬವರು ಕುಸಿದು ಬಿದಿದ್ದ ಯುವತಿಯನ್ನು ಆಸ್ಪತ್ರೆಗೆ ಒಯ್ದಿದ್ದರು. ವೈದ್ಯರು ಪರಿಶೀಲಿಸಿದಾಗ ಯುವತಿ ಸಾವನ್ನಪ್ಪಿರುವುದು ದೃಢಪಟ್ಟಿತ್ತು.

ಯುವತಿಯ ಮನೆ ಮಂದಿ ತಮ್ಮ ಪುತ್ರಿ ನಾಪತ್ತೆ ಆದ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2009ರಲ್ಲಿ ಮೋಹನ್ ಬಂಧನದ ಬಳಿಕ ಈ ಯುವತಿಯ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಆಕೆಯ ಹೆತ್ತವರು ಲಷ್ಕರ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆಯ ಸಂದರ್ಭ ಆರೋಪಿ ಮೋಹನ್ ಈ ಯುವತಿಯನ್ನು ಕರೆದೊಯ್ದು ವಾಸ್ತವ್ಯ ಮಾಡಿದ್ದ ಮೈಸೂರಿನ ಲಾಡ್ಜ್‌ನ್ನು ತೋರಿಸಿದ್ದನು. ಈ ಪ್ರಕರಣದಲ್ಲಿ ಒಟ್ಟು 48 ಸಾಕ್ಷಿಗಳು ಹಾಗೂ 70 ದಾಖಲೆಗಳನ್ನು ನ್ಯಾಯಾಲಯ ಪರಿಗಣಿಸಿತ್ತು.
 ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಅವರು ಈ ಮೊದಲು ಹಾಗೂ ಪ್ರಸ್ತುತ ಜಯರಾಮ ಶೆಟ್ಟಿ ಅವರು ವಾದಿಸಿದ್ದರು.

19 ಪ್ರಕರಣಗಳಲ್ಲಿ ನಾಲ್ಕರಲ್ಲಿ ಮರಣದಂಡನೆ

ಸಯನೈಡ್ ಮೋಹನ್‌ನ 19 ಪ್ರಕರಣಗಳ ವಿಚಾರಣೆ ಮುಗಿದ್ದಿದ್ದು, ಇನ್ನು 1 ಪ್ರಕರಣ ವಿಚಾರಣೆಗೆ ಬಾಕಿ ಇದೆ. 19 ಪ್ರಕರಣಗಳ ಪೈಕಿ 4ರಲ್ಲಿ ಮರಣ ದಂಡನೆ ಶಿಕ್ಷೆ ಆಗಿದೆ. ಈ ಪೈಕಿ ಒಂದು ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಜೀವಾವಧಿ ಶಿಕ್ಷೆಗೆ ಹಾಗೂ ಇನ್ನೊಂದು ಪ್ರಕರಣದಲ್ಲಿ ಐದು ವರ್ಷಗಳ ಕಠಿಣ ಶಿಕ್ಷೆಗೆ ಇಳಿಸಿದೆ. ಒಂದು ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇನ್ನೊಂದು ಪ್ರಕರಣದಲ್ಲಿ ಹೈಕೋರ್ಟ್ ತೀರ್ಮಾನ ಇನ್ನಷ್ಟೇ ಬರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News