ಬಸ್ ಮಾಲಕರಿಂದ ಪ್ರಯಾಣಿಕರ ಮೇಲೆ ಟೋಲ್ ಸೆಸ್ ಹೇರಿಕೆ

Update: 2020-02-17 14:42 GMT

ಮಂಗಳೂರು, ಫೆ.16: ಫಾಸ್ಟ್ಟಾಗ್ ಕಡ್ಡಾಯ, ಟೋಲ್ ದರಗಳ ಹೆಚ್ಚಳವನ್ನು ಮುಂದಿಟ್ಟು ದ.ಕ., ಉಡುಪಿ ಜಿಲ್ಲಾ ಬಸ್ ಮಾಲಕರು ಪ್ರತಿ ಸ್ಟೇಜ್‌ಗೆ ಟಿಕೆಟ್ ಮೇಲೆ ತಲಾ ಒಂದು ರೂ. ಪ್ರಯಾಣ ದರ ಹೆಚ್ಚಳ ಮಾಡಿರುವುದು ಖಂಡನೀಯ. ಜಿಲ್ಲಾಡಳಿತ, ಆರ್‌ಟಿಎ ಅನುಮತಿ ಪಡೆಯದೆ ಈ ರೀತಿ ಏಕಪಕ್ಷೀಯ, ನಿಯಮ ಬಾಹಿರ ಏರಿಕೆ ಮಾಡುವುದನ್ನು ಒಪ್ಪಲಾಗದು. ಉಭಯ ಜಿಲ್ಲಾಡಳಿತಗಳು ತಕ್ಷಣ ಮಧ್ಯ ಪ್ರವೇಶಿಸಿ ದರ ಏರಿಕೆಯನ್ನು ತಡೆ ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ಸುರತ್ಕಲ್ನಲ್ಲಿ ಅಕ್ರಮ ಟೋಲ್ ವಸೂಲಿಯನ್ನು ಸಂಘಟಿತ ವಿಭಾಗವಾದ ಬಸ್ ಮಾಲಕರ ಒಕ್ಕೂಟಗಳು ಪ್ರತಿಭಟಿಸಬೇಕು. ಅದರ ಹೊರತಾಗಿ ಟೋಲ್ ದರ ಹೆಚ್ಚಳವನ್ನೇ ನೆಪವಾಗಿಸಿ ಪ್ರಯಾಣಿಕರ ಮೇಲೆ ಯದ್ವಾತದ್ವ ದರ ವಿಧಿಸುವುದು ಖಂಡನೀಯ. ದ.ಕ., ಉಡುಪಿ ಜಿಲ್ಲೆಯಲ್ಲಿ ಟೋಲ್ಗೇಟ್‌ಗಳಲ್ಲಿ ವಿಪರೀತ ದರ ವಸೂಲಿ, ಅಕ್ರಮ ಟೋಲ್ಗೇಟ್‌ಗಳ ವಿರುದ್ದ ನಾಗರಿಕ ಸಂಘಟನೆಗಳು ಹೋರಾಟಗಳನ್ನು ಹಮ್ಮಿಕೊಂಡಾಗ ಬಸ್ ಮಾಲಕರ ಸಂಘಗಳು ಪ್ರತಿಭಟನೆಯ ಜೊತೆಗೆ ನಿಲ್ಲಲಿಲ್ಲ. ಟೋಲ್ ಕೇಂದ್ರಗಳ ವಿರುದ್ದ ಹೋರಾಟವನ್ನೂ ಮಾಡಲಿಲ್ಲ. ಅದರಲ್ಲೂ ಹೆದ್ದಾರಿ ಪ್ರಾಧಿಕಾರವೇ ಸ್ವತಃ ಮುಚ್ಚಲು ನಿರ್ಧರಿಸಿರುವ ಸುರತ್ಕಲ್ನ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಅಕ್ರಮ ಟೋಲ್ ಸಂಗ್ರಹದ ವಿರುದ್ದ ಟೋಲ್ ವಿರೋಧಿ ಹೋರಾಟ ಸಮಿತಿ ಹೋರಾಟ ನಡೆಸಿದಾಗಲೂ ಬಸ್ ಮಾಲಕರ ಸಂಘ ಹೋರಾಟ ಬೆಂಬಲಿಸಿ ಬೀದಿಗಿಳಿಯಲಿಲ್ಲ. ಖಾಸಗಿ ಬಸ್‌ಗಳು ಸುರತ್ಕಲ್ ಅಕ್ರಮ ಟೋಲ್ ಕೇಂದ್ರದ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ್ದರೆ ಸುರತ್ಕಲ್ ಟೋಲ್ ಮುಚ್ಚದೆ ಸರಕಾರಕ್ಕೆ ಬೇರೆ ದಾರಿ ಇರಲಿಲ್ಲ ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಟೋಲ್ ಕೇಂದ್ರಗಳು ಆರಂಭಗೊಂಡಾಗ ಪ್ರಯಾಣಿಕರ ಪ್ರತಿ ಟಿಕೆಟ್ ಮೇಲೆ ಬಸ್ ಮಾಲಕರ ಸಂಘ ತಲಾ ಎರಡು ರೂ. ಟೋಲ್ ಸೆಸ್ ವಿಧಿಸಿತ್ತು. ಈಗ ಮತ್ತೆ ಟೋಲ್ ದರ ಅಲ್ಪಹೆಚ್ಚಳವನ್ನು ಮುಂದಿಟ್ಟು ಪ್ರತಿ ಸ್ಟೇಜ್ ಮೇಲೆ ಟಿಕೆಟ್‌ಗೆ ಒಂದು ರೂ. ಸೆಸ್ ಅನ್ನು ಜಿಲ್ಲಾಡಳಿತ, ಆರ್‌ಟಿಎ ಅನುಮತಿ ಪಡೆಯದೆ ಏಕಪಕ್ಷೀಯವಾಗಿ ಹೆಚ್ಚುವರಿಯಾಗಿ ವಿಧಿಸಿದೆ. ಇದು ನಿಯಮಗಳ ವಿರುದ್ಧವಾಗಿದೆ. ಈ ಹೆಚ್ಚಳದಿಂದ ಮಂಗಳೂರಿನಿಂದ ಉಡುಪಿ, ಕುಂದಾಪುರದ ಕಡೆಗೆ ಪ್ರಯಾಣಿಸುವ ಪ್ರತಿಯೊಂದು ಟಿಕೆಟ್ ಮೇಲೆ ತಲಾ ಐದು ರೂ. ಹೆಚ್ಚುವರಿ ಹೊರೆ ಬೀಳುತ್ತದೆ. ಇದು ಅಕ್ರಮ ಸುಲಿಗೆಯಾಗಿದ್ದು, ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯು ಬಸ್ ಮಾಲಕರ ಸಂಘದ ಈ ಏಕಪಕ್ಷೀಯ ಸುಲಿಗೆ ನೀತಿಯನ್ನು ತೀವ್ರವಾಗಿ ವಿರೋಧಿಸುತ್ತದೆ. ಪ್ರಯಾಣಿಕರು ಹೆಚ್ಚುವರಿ ದರ ಪಾವತಿಸದೆ ಅಸಹಕಾರ ನೀಡಲು ಸಮಿತಿ ಮನವಿ ಮಾಡುತ್ತದೆ. ಉಭಯ ಜಿಲ್ಲಾಡಳಿಗಳು ತಕ್ಷಣ ಮಧ್ಯ ಪ್ರವೇಶಿಸಿ ಹೆಚ್ವುವರಿ ಟೋಲ್ ಸೆಸ್ ವಸೂಲಿಗೆ ತಡೆ ವಿಧಿಸುವಂತೆ ಆಗ್ರಹಿಸುತ್ತದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News