​ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಬಿಡಲಾರೆವು: ಕೆ.ಎಂ. ಶರೀಫ್

Update: 2020-02-17 15:01 GMT

ಮಂಗಳೂರು, ಫೆ.17: ಫ್ಯಾಶಿಸ್ಟ್ ಶಕ್ತಿಗಳು ಎಷ್ಟೇ ತಿಪ್ಪರಲಾಗ ಹಾಕಿದರೂ ಕೂಡ ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಬಿಡಲಾರೆವು. ದೇಶದ ನೈಜ ಕಾಲಾಳುಗಳಂತೆ ಕಾರ್ಯನಿರ್ವಹಿಸುವ ಪಿಎಫ್‌ಐ ಕಾರ್ಯಕರ್ತರು ಆಳುವ ವರ್ಗದ ಎಲ್ಲಾ ರೀತಿಯ ದಮನ ನೀತಿಯನ್ನು ಹಿಮ್ಮೆಟ್ಟಿ ಸಂವಿಧಾನವನ್ನು ರಕ್ಷಿಸುವ ಮೂಲಕ ದೇಶಾದ್ಯಂತ ತುಳಿತಕ್ಕೊಳಗಾದ ಮುಸ್ಲಿಮರು, ಕ್ರೈಸ್ತರು, ದಲಿತರು, ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕಿಸಿಕೊಡಲು ಕಟಿಬದ್ಧವಾಗಿದೆ ಎಂದು ಪಿಎಫ್‌ಐ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ.ಶರೀಫ್ ಹೇಳಿದ್ದಾರೆ.

ಪಿಎಫ್‌ಐ ಸಂಘಟನೆಯ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ದೇರಳಕಟ್ಟೆಯ ಮೈದಾನದಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣಗೈದರು.

ಮೋದಿ ಸರಕಾರವು ದಿಗ್ಬಂಧನ ಕೇಂದ್ರ ತೆರೆಯುವ ಮೂಲಕ ಮುಸ್ಲಿಮರನ್ನು ಭಯಭೀತಿಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ಮುಸ್ಲಿಂ ಸಮುದಾಯ ಎಂದೂ ಕೂಡ ಇಂತಹ ಕೇಂದ್ರಗಳ ಬಗ್ಗೆ ಭಯಭೀತಿ ಹೊಂದಿಲ್ಲ. ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಮೂಲಕ ದೇಶದಲ್ಲಿ ಗೊಂದಲ, ಅಶಾಂತಿ ಸೃಷ್ಟಿಸಲು ಮುಂದಾಗಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ತಕ್ಕ ಪಾಠ ಕಲಿಸಲು ಮುಸ್ಲಿಮರು ಸಿದ್ಧರಾಗಿದ್ದಾರೆ. ಅದಕ್ಕಾಗಿಯೇ ದೇಶಾದ್ಯಂತ ಅಧಿಕ ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರ ಸಹಿತ ಮುಸ್ಲಿಮ್ ಮತ್ತಿತರ ಸಮುದಾಯದ ಜನರು ಬೀದಿಗಿಳಿದಿದ್ದಾರೆ. ಕೇಂದ್ರ ಸರಕಾರವು ಈ ಕರಾಳ ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರೆಗೆ ಹೋರಾಟ ನಿಲ್ಲದು. ಪ್ರಾಣ ತೆತ್ತಾದರೂ ಸರಿ, ದೇಶದ ಸ್ವಾತಂತ್ರವು ಮತ್ತೆ ನೆಲೆ ನಿಲ್ಲಲು ಹೋರಾಟ ಮುಂದುವರಿಸಲಾಗುವುದು ಎಂದು ಕೆಎಂ ಶರೀಫ್ ಹೇಳಿದರು.

ದೇಶಾದ್ಯಂತ ‘ಗುಜರಾತ್ ಪ್ರಯೋಗ ಶಾಲೆ’ ಮಾಡಲು ಬಿಜೆಪಿ ಮುಂದಾಗಿದೆ. ಈ ಫ್ಯಾಸಿಸ್ಟ್ ಶಕ್ತಿಗಳನ್ನು ಹತ್ತಿಕ್ಕಲು ಕಾಂಗ್ರೆಸ್, ಎಡಪಕ್ಷಗಳು ಕೈ ಜೋಡಿಸಬೇಕಿತ್ತು. ಆದರೆ ಆ ಪಕ್ಷಗಳಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ. ಹಾಗಂತ ಪಿಎಫ್‌ಐ ಸುಮ್ಮನೆ ಕೂರುವುದಿಲ್ಲ. ಬ್ರಿಟಿಷರ ಬೂಟು ನೆಕ್ಕಿದವರ ಸಂತತಿಯ ಮೋದಿ-ಅಮಿತ್‌ಶಾ ಅವರು ಪಿಶಾಚಿಯ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಸತ್ಯ, ಅಹಿಂಸೆಯ ಮುಂದೆ ಆ ಪಕ್ಷ ಖಂಡಿತಾ ನಾಶವಾಗಲಿದೆ ಎಂದ ಕೆ.ಎಂ. ಶರೀಫ್, ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಗೋಲಿಬಾರ್ ಮೂಲಕ ಇಬ್ಬರು ಅಮಾಯಕರನ್ನು ಕೊಂದಿದ್ದಾರೆ. ಅವರ ಕೊರಳನ್ನು ಕಾನೂನಿನ ಕುಣಿಕೆಯೊಳಗೆ ಸಿಕ್ಕಿಸಲು ಪಿಎಫ್‌ಐ ಕಟಿಬದ್ಧವಾಗಿದೆ ಎಂದರು.

ಪ್ರಗತಿಪರ ಚಿಂತಕ ಫಾ. ವಿಲಿಯಂ ಮಾರ್ಟಿಸ್ ಮಾತನಾಡಿ ಮುಸ್ಲಿಮರು, ಕ್ರೈಸ್ತರು, ದಲಿಯರು ಈ ನೆಲದ ಮಣ್ಣಿನ ಮಕ್ಕಳು, ಮೂಲ ನಿವಾಸಿಗಳು. ವಿದೇಶಿ ಮೂಲದ ಮನುವಾದಿಗಳು ಈ ಮಣ್ಣಿನ ಮಕ್ಕಳನ್ನು ಹೊರಗಟ್ಟಲು ಸಾಧ್ಯವೇ ಇಲ್ಲ. ಗಾಂಧಿಯನ್ನು ಕೊಂದ ಮನುವಾದಿಗಳಿಗೆ ಕರಾಳ ಕಾಯ್ದೆಗೆ ಸಂಬಂಧಿಸಿ ಯಾವುದೇ ದಾಖಲೆ ಕೊಡದೆ ಅಸಹಕಾರ ನೀಡಬೇಕು ಎಂದರು.

ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ರಾ.ಚಿಂತನ್, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಸಿಎಫ್‌ಐ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ, ಎನ್‌ಡಬ್ಲುಎಫ್ ರಾಜ್ಯಾಧ್ಯಕ್ಷೆ ಝೀನತ್ ಗೂಡಿನಬಳಿ ಮತ್ತಿತರರು ಮಾತನಾಡಿದರು.

ವೇದಿಕೆಯಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್, ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ನ್ಯಾಯವಾದಿ ಮಜೀದ್ ಖಾನ್, ಜಲೀಲ್ ಕೃಷ್ಣಾಪುರ, ಅಲ್ಫಾನ್ಸೋ ಫ್ರಾಂಕೋ, ಅಕ್ರಂ ಹಸನ್, ಶರೀಫ್ ಕೊಡಾಜೆ, ಅಬ್ದುರ್ರಝಾಕ್ ಕೆಮ್ಮಾರ, ಜಾಫರ್ ಸಾದಿಕ್ ಫೈಝಿ, ಮುಹಮ್ಮದ್ ಅಶ್ರಫ್, ಕಾರ್ಪೊರೇಟರ್‌ಗಳಾದ ಸಂಶಾದ್ ಅಬೂಬಕರ್, ಮುನೀಬ್ ಬೆಂಗರೆ, ಎಸ್‌ಕೆಎಸ್‌ಎಂ ದ.ಕ.ಜಿಲ್ಲಾ ಉಪಾಧ್ಯಕ್ಷ ಎಸ್‌ಎಂ ಬಾಷಾ, ಅಖಿಲ ಭಾರತ ಬ್ಯಾರಿ ಪರಿಷತ್ ಸ್ಥಾಪಕಾಧ್ಯಕ್ಷ ಜೆ. ಹುಸೈನ್, ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ಹಾಜಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಪಿಎಫ್‌ಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಶ್ರಫ್ ಜೋಕಟ್ಟೆ ಸ್ವಾಗತಿಸಿದರು.

ಕುತ್ತಾರ್ ಸಮೀಪದ ಯೆನೆಪೊಯ ಆಸ್ಪತ್ರೆಯಿಂದ ದೇರಳಕಟ್ಟೆಯ ಮೈದಾನದವರೆಗೆ ಆಕರ್ಷಕ ಯುನಿಟಿ ಮಾರ್ಚ್ ನಡೆಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News