ಮಂಗಳೂರು: ಅಲೋಶಿಯನ್ ಸಾಹಿತ್ಯ ಉತ್ಸವಕ್ಕೆ ಚಾಲನೆ

Update: 2020-02-17 15:04 GMT

ಮಂಗಳೂರು, ಫೆ.17: ನಗರದ ಸಂತ ಅಲೋಶಿಯಸ್ ಕಾಲೇಜು ವತಿಯಿಂದ ನಾಲ್ಕು ದಿನಗಳ ಕಾಲ ನಡೆಯುವ ‘ಅಲೋಶಿಯನ್ ಸಾಹಿತ್ಯ ಉತ್ಸವ’ಕ್ಕೆ ಸೋಮವಾರ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಪ್ರೊ ಕೆ. ಚಿನ್ನಪ್ಪ ಗೌಡ ಜಾಗತಿಕ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯನ್ನು ಸ್ಥಳೀಯ ಸಂಸ್ಕೃತಿ ಹಾಗೂ ಜ್ಞಾನ ಪರಂಪರೆಯೊಂದಿಗೆ ಮುಖಾಮುಖಿಯಾಗಿಸಿಕೊಳ್ಳುವುದರಿಂದ ಸ್ಥಳೀಯತೆಗೆ ಹಾನಿಯಾಗುತ್ತದೆ. ಈ ಹಾನಿ ತಪ್ಪಿಸಲು ಶಿಕ್ಷಣ ಸಂಸ್ಥೆಗಳು ಸ್ಥಳೀಯ ಪರಂಪರೆಗೆ ಆದ್ಯತೆ ನೀಡಿ ಮಕ್ಕಳ ಪ್ರತಿಭೆ ಬೆಳಗಿಸಬೇಕು ಎಂದು ಹೇಳಿದರು.

ಭಾಷಾ ವೈವಿಧ್ಯತೆ, ಬಹು ಸಂಸ್ಕೃತಿ, ಬಹು ಕಲಾ ಮಾಧ್ಯಮಗಳು ದೇಶದ ವೈಶಿಷ್ಟ್ಯವಾಗಿದೆ. ದೇಶದ ಕಲಾ ಶ್ರೀಮಂತಿಕೆ ಇಂತಹವುಗಳ ಮೇಲೆ ನಿಂತಿದೆ. ಜಾಗತಿಕ ಜ್ಞಾನ ಪರಂಪರೆ ಮತ್ತು ಜಾಗತಿಕ ಭಾಷಾ ಪರಂಪರೆ ಬೆಳೆಯುತ್ತಿದ್ದಂತೆ ಸ್ಥಳೀಯ ಪರಂಪರೆಗಳಿಗೆ ಹಾನಿಯಾಗತೊಡಗಿದೆ. ಶ್ರೇಷ್ಠ, ಕನಿಷ್ಠ ವಿಚಾರಗಳು ರೂಪು ತಳೆದಿವೆ. ಭಾಷಾ, ಸಾಂಸ್ಕೃತಿಕ ಪರಂಪರೆಯಲ್ಲಿ ಶ್ರೀಮಂತ, ಬಡ, ಶ್ರೇಷ್ಠ, ಕನಿಷ್ಠವೆಂಬ ತಾರತಮ್ಯ ಮಾಡದೆ, ಸಮಾನ ಪ್ರಾಮುಖ್ಯತೆ ನೀಡಿದಾಗ ಸ್ಥಳೀಯ ಪರಂಪರೆ ಬೆಳೆಯುತ್ತದೆ ಎಂದು ಡಾ. ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

ಜಾಗತಿಕ ಭಾಷೆಗಳು ಆರ್ಥಿಕ ಶಕ್ತಿ ಮತ್ತು ಅಧಿಕಾರದಿಂದ ಪ್ರಭುತ್ವ ಸಾಧಿಸಿಕೊಂಡಿವೆ. ಆದರೆ ಸ್ಥಳೀಯ ಭಾಷೆಗಳಿಗೆ ಇವರಡರ ಕೊರತೆ ಇದೆ. ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆಗಳ ಮೇಲೆ ಕಾರ್ಯಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು ಮುಂದಾಗಬೇಕು ಎಂದು ಡಾ.ಚಿನ್ನಪ್ಪ ಗೌಡ ನುಡಿದರು.

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಾ. ಡೈನೀಶಿಯಸ್ ವಾಸ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್‌ಟಿಆರ್‌ಐಡಿಇ ಸಂಯೋಜಕ ಡಾ. ಆಲ್ವಿನ್ ಡೆಸಾ, ಕಾರ್ಯಕ್ರಮ ಸಂಘಟನಾ ಕಾರ್ಯದರ್ಶಿಗಳಾದ ಗಿರೀಶ್ ಎನ್., ಡಾ. ದಿನೇಶ್ ನಾಯಕ್ ಉಪಸ್ಥಿತರಿದ್ದರು.

ಆಂಗ್ಲ ವಿಭಾಗ ಮುಖ್ಯಸ್ಥ ಡಾ. ರತನ್ ಮೊಹುಂತಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News