ಬಿರುಗಾಳಿಗೆ ಸಿಲುಕಿ ಓಲಾಡಿದರೂ ಸುರಕ್ಷಿತವಾಗಿ ಇಳಿದ ವಿಮಾನ: ವಿಡಿಯೋ ವೈರಲ್

Update: 2020-02-17 16:37 GMT

ಲಂಡನ್, ಫೆ. 17: ‘ಡೆನಿಸ್ ಬಿರುಗಾಳಿ’ಗೆ ಸಿಲುಕಿದ ಹೊರತಾಗಿಯೂ ವಿಮಾನವೊಂದು ಶನಿವಾರ ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣದಲ್ಲಿ ಸಾಹಸಿಕವಾಗಿ ಭೂಸ್ಪರ್ಶ ಮಾಡಿದೆ.

ಎತಿಹಾದ್ ವಿಮಾನಯಾನ ಸಂಸ್ಥೆಗೆ ಸೇರಿದ ಏರ್‌ಬಸ್ ಎ380 ಶನಿವಾರ ಇಳಿಯುತ್ತಿರುವಾಗ, ರನ್‌ವೇಯ ಮೇಲೆ ಆಕಾಶದಲ್ಲಿ ಪಕ್ಕಕ್ಕೆ ಸರಿಯುತ್ತಿದ್ದುದನ್ನು ವೀಡಿಯೊ ತುಣುಕೊಂದು ತೋರಿಸಿದೆ. ಆದರೂ, ಬಳಿಕ ವಿಮಾನವು ಯಶಸ್ವಿಯಾಗಿ ಭೂಸ್ಪರ್ಶ ಮಾಡಿದೆ ಎಂದು ಬ್ರಿಟಿಶ್ ಮಾಧ್ಯಮಗಳು ವರದಿ ಮಾಡಿವೆ.

ಡೆನಿಸ್ ಬಿರುಗಾಳಿಯ ಹಿನ್ನೆಲೆಯಲ್ಲಿ ಶನಿವಾರ ಬ್ರಿಟನ್‌ಗೆ ಬರುವ ಮತ್ತು ಅಲ್ಲಿಂದ ಹೋಗುವ ನೂರಾರು ವಿಮಾನಗಳನ್ನು ರದ್ದುಪಡಿಸಲಾಗಿತ್ತು. ಬ್ರಿಟನ್‌ಗೆ ಅಪ್ಪಳಿಸಿದ ಬಿರುಗಾಳಿಯು ವಾರಾಂತ್ಯದಲ್ಲಿ ಪ್ರಬಲ ಗಾಳಿ ಮತ್ತು ಭಾರೀ ಮಳೆಯನ್ನು ಸೃಷ್ಟಿಸಿದೆ. ಬ್ರಿಟನ್‌ನ ಕೆಲವು ಭಾಗಗಳಲ್ಲಿ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ಸುರಿಯುವ ಮಳೆಯು ಕೇವಲ ಎರಡೇ ದಿನಗಳಲ್ಲಿ ಸುರಿದಿದೆ.

ಬ್ರಿಟನ್: ‘ಡೆನಿಸ್’ ಬಿರುಗಾಳಿಗೆ ಓರ್ವ ಬಲಿ

‘ಡೆನಿಸ್’ ಬಿರುಗಾಳಿ ರವಿವಾರ ಬ್ರಿಟನ್‌ನಾದ್ಯಂತ ಬೀಸಿದ್ದು, ನದಿಗೆ ಬಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಬಿರುಗಾಳಿಯು ಫ್ರಾನ್ಸ್‌ನಲ್ಲೂ ಸಾಕಷ್ಟು ರಂಪಾಟ ನಡೆಸಿದೆ. ಫ್ರಾನ್ಸ್‌ನ ವಾಯುವ್ಯ ಭಾಗದಲ್ಲಿ ಸುಮಾರು 60,000 ಮಂದಿ ವಿದ್ಯುತ್ ಇಲ್ಲದೆ ದಿನಗಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News