ದೇಶದಲ್ಲೀಗ ಕೇಂದ್ರದಿಂದ ಅಘೋಷಿತ ತುರ್ತು ಪರಿಸ್ಥಿತಿ: ಸೊರಕೆ

Update: 2020-02-17 15:09 GMT

ಉಡುಪಿ, ಫೆ.17: ಕೇಂದ್ರ ಸರಕಾರ ತನ್ನ ರಾಜಕೀಯ ಉದ್ದೇಶಗಳಿಗಾಗಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವನ್ನು ನಿರ್ಮಿಸಿದೆ. ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಿ ಜಾತಿ, ಧರ್ಮ, ಭಾಷೆಯ ಆಧಾರದಡಿ ಜನರನ್ನು ವಿಭಜನೆ ಮಾಡಿ ದೇಶಾದ್ಯಂತ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ವಿನಯಕುಮಾರ್ ಸೊರಕೆ ಆರೋಪಿಸಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದು ಗೊಳಿಸಲು ಮುಂದಾಗಿರುವ ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನಿಲುವುಗಳ ವಿರುದ್ಧ ಅಜ್ಜರಕಾಡು ಹುತಾತ್ಮರ ಸ್ಮಾರಕರ ಮುಂಭಾಗ ಸೋಮವಾರ ಹಮ್ಮಿಕೊಳ್ಳಲಾಗಿದ್ದಪ್ರತಿಭಟನೆಯಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಕಣ್ಣು, ಕಿವಿ, ಮೂಗು ಇಲ್ಲದಂತೆ ವರ್ತಿಸುತ್ತಿದೆ. ತನ್ನ ಆಡಳಿತ ವೈಫಲ್ಯ, ನ್ಯೂನತೆ ಗಳನ್ನು ಮುಚ್ಚಿ ಹಾಕುವುದಕ್ಕೆ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದೆ. ಅದು ಸಂವಿಧಾನದ ದಿಕ್ಕನ್ನು ಬದಲಾಯಿಸುವ ಕಾರ್ಯಕ್ರಮ ಹಾಕಿಕೊಂಡಿದ್ದು, ಪ್ರಜಾಪ್ರಭುತ್ವದ ಎಲ್ಲಾ ಅಸಗಳನ್ನು ಶಿಥಿಲಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಈ ಸರಕಾರ ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜನರ ಸಂಕಷ್ಟ, ರೈತರ ಆತ್ಮಹತ್ಯೆ, ಉದ್ಯೋಗ ಸೃಷ್ಟಿ, ಅಧೋಗತಿಗಿಳಿಯುತ್ತಿರುವ ಜಿಡಿಪಿ ಕುರಿತಂತೆ ದೇಶದ ಜನತೆಗೆ ಯಾವುದೇ ಉತತಿರ ಕೊಡುತ್ತಿಲ್ಲ. ಆದರೆ ಬಡವರಿಗೆ, ದೀನ ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಈ ದೇಶದ ಸಂವಿಧಾನ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸುವ ಷಡ್ಯಂತ್ರವನ್ನು ನಡೆಸುತ್ತಿದೆ ಎಂದವರು ಗುರುತರವಾದ ಆರೋಪ ಮಾಡಿದರು.

ರಾಜ್ಯ ಸರಕಾರದಲ್ಲಿ ನುಸುಳುಕೋರರು!:  ಅಧಿಕಾರದ ಆಸೆಗಾಗಿ ರಾಜ್ಯದ ಲ್ಲಿದ್ದ ಸಮ್ಮಿಶ್ರ ಸರಕಾರವನ್ನು ಕೆಡವಿ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿಸಿ ಸರಕಾರ ರಚಿಸಿದ್ದಾರೆ. ಹೀಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ನುಸುಳುಕೋರರಿಗೆ ಸಚಿವ ಸ್ಥಾನಮಾನ ನೀಡಿ ಇಟ್ಟುಕೊಳ್ಳಲಾಗಿದೆ. ಇದು ಪಕ್ಷದಲ್ಲಿರುವ ಮೂಲ ಬಿಜೆಪಿಗರನ್ನು ಕೆರಳಿಸಿ ರುವುದರಿಂದ ಅವರು ಈಗ ಸುಯದ ನಿರೀಕ್ಷೆಯಲ್ಲಿದ್ದಾರೆ ಎಂದರು.

ರಾಜ್ಯದ ಸಿಎಂ ಶಕ್ತಿಹೀನರಾಗಿದ್ದಾರೆ. ಸರಕಾರ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿ ಹಾಗೂ ಶ್ರೀಮಂತರಿಗೆ ಮಾರಾಟ ಮಾಡಲಾಗುತ್ತಿದೆ. ರಿಯಲ್ ಎಸ್ಟೇಟ್ ಕುಸಿದು ಬಿದ್ದಿದೆ. 15 ಗಂಭೀರ ಪ್ರಕರಣವುಳ್ಳ ವ್ಯಕ್ತಿಯೊಬ್ಬ ಅರಣ್ಯ ಸಚಿವ ರಾಗಿದ್ದಾರೆ. ಸಹಕಾರಿ ಸಂಸ್ಥೆಯನ್ನು ಮುಗಿಸಿ ದವರು ಸಹಕಾರಿ ಸಚಿವರಾಗಿದ್ದಾರೆ. ಇದೆಲ್ಲ ಕೇಂದ್ರದ ಬಿಜೆಪಿ ದಿವಾಳಿತನಕ್ಕೆ ತಾಜಾ ಉದಾಹರಣೆ ಎಂದವರು ಲೇವಡಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ನಾಯಕರ ಅಸಾಮರ್ಥ್ಯದಿಂದಾಗಿ ದೇಶ ಇಂದು ಅತ್ಯಂತ ಸಂಕಷ್ಟಕರ ಸ್ಥಿತಿಯಲ್ಲಿದೆ. ಡಾ.ಮನನೋಹನ್ ಸಿಂಗ್ ಪ್ರಧಾನಿ ಯಾಗಿದ್ದಾಗ ದೇಶದ ಜಿಡಿಪಿ ಶೇ.8ರಿಂದ 9ರಲ್ಲಿದ್ದರೆ ಈಗ ಶೇ.5ಕ್ಕಿಂತಲೂ ಕೆಳಗಿಳಿದಿದಿದೆ. ಇದಕ್ಕೆ ಬಿಜೆಪಿ ನಾಯಕರ ಮನಸ್ಥಿತಿಯೇ ಕಾರಣ. ಕಳೆದ ಆರು ವರ್ಷಗಳಲ್ಲಿ ಈ ಸರಕಾರ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನೇ ಮಾಡಿಲ್ಲ ಎಂದು ದೂರಿದರು.

ಈಗ ಈ ದೇಶದ ಮೂಲನಿವಾಸಿಗಳ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹಾಗೂ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ನೀಡಿದ ಮೀಸಲಾತಿ ಯನ್ನು ರದ್ದು ಗೊಳಿಸುವ ಹುನ್ನಾರವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಎಂದಿನಂತೆ ಕಾಂಗ್ರೆಸ್ ಪಕ್ಷ ಇವರು ಜೊತೆಗೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಕೊಡವೂರು ತಿಳಿಸಿದರು.

ಮುಖಂಡರಾದ ಎಂ.ಎ.ಗಫೂರ್, ವರೋನಿಕಾ ಕರ್ನೇಲಿಯೊ, ನೀರೆ ಕೃಷ್ಣ ಶೆಟ್ಟಿ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯ ಬಳಿಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಯೋಗವೊಂದು ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.

ಪ್ರತಿಭಟನೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಬಿ.ನರಸಿಂಹ ಮೂರ್ತಿ, ಹರೀಶ್ ಕಿಣಿ, ಭಾಸ್ಕರ್‌ರಾವ್ ಕಿದಿಯೂರು, ಕೀರ್ತಿ ಶೆಟ್ಟಿ, ಉಪೇಂದ್ರ ಮೆಂಡನ್, ಹರೀಶ್ ಶೆಟ್ಟಿ ಪಾಂಗಾಳ, ಅಣ್ಣಯ್ಯ ಶೆಟ್ಟಿ, ಸತೀಶ್ ಅಮೀನ್ ಪಡುಕರೆ, ರಮೇಶ್ ಕಾಂಚನ್, ಗೀತಾ ವಾಗ್ಲೆ, ಪ್ರಖ್ಯಾತ ಶೆಟ್ಟಿ, ಕೇಶವ ಕೋಟ್ಯಾನ್, ವಿಲಿಯಂ ಮಾರ್ಟಿಸ್, ರೋಶನಿ ಒಲಿವೆರಾ, ಗಣೇಶ್ ನೆರ್ಗಿ, ಇಸ್ಮಾಯಿಲ್ ಆತ್ರಾಡಿ, ಉದ್ಯಾವರ ನಾಗೇಶ್ ಕುಮಾರ್, ಯುವರಾಜ್, ಮೀನಾಕ್ಷಿ ಮಾಧವ ಬನ್ನಂಜೆ, ಯತೀಶ್ ಕರ್ಕೇರ, ನವೀನ್‌ಚಂದ್ರ ಶೆಟ್ಟಿ ಕಾಪು, ವಿಶ್ವಾಸ್ ಅಮೀನ್, ಡಾ. ಸುನೀತಾ ಶೆಟ್ಟಿ, ಗಣೇಶ್ ರಾಜ್ ಸರಳೇಬೆಟ್ಟು, ಶಾಂತರಾಮ್, ನಾರಾಯಣ ಕುಂದರ್, ಪ್ರಕಾಶ ಅಂದ್ರಾದೆ, ಮಹಾಬಲ ಕುಂದರ್, ಶಬ್ಬೀರ್ ಅಹ್ಮದ್, ಹರೀಶ್ ಶೆಟ್ಟಿ, ಹಬೀಬ್ ಆಲಿ, ತಾರಾನಾಥ ಕಿದಿಯೂರು, ಜ್ಯೋತಿ ಹೆಬ್ಬಾರ್, ರಾಜೇಶ್ ನಾಯಕ್, ಆಕಾಶ್ ರಾವ್, ಲೂವಿಸ್ ಲೋಬೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News