ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆ: ಮುಸ್ಲಿಂ ಜಸ್ಟೀಸ್ ಫೋರಮ್‌ ದೂರು

Update: 2020-02-17 15:21 GMT

ಮಂಗಳೂರು, ಫೆ.17: ಪ್ರವಾದಿ ಮುಹಮ್ಮದ್ (ಸ) ಅವರನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಮಾಡಿದ ಆರೋಪದಲ್ಲಿ ಮಧುಗಿರಿ ಮೋದಿ ಯಾನೆ ಅತುಲ್ ಕುಮಾರ್ ಎಂಬಾತನ ವಿರುದ್ಧ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದೆ.

ಮಧುಗಿರಿ ಮೋದಿ ಫೇಸ್‌ಬುಕ್ ಖಾತೆಯಲ್ಲಿ  ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಕೀಳುಮಟ್ಟದಲ್ಲಿ ಮತ್ತು ಅವಾಚ್ಯವಾಗಿ ನಿಂದಿಸಿದ್ದಾನೆ. ಕೋಮುದ್ವೇಷ ಹರಡಲು, ಪರಸ್ಪರ ಗಲಾಟೆ ನಡೆಸಿ ಸಾರ್ವಜನಿಕ ನೆಮ್ಮದಿ ಹಾಳು ಮಾಡಲು ಯತ್ನಿಸಿದ್ದಾನೆ ಎಂದು ಮುಸ್ಲಿಂ ಜಸ್ಟೀಸ್ ಫೋರಮ್ ದ.ಕ. ಸಮಿತಿಯು ದೂರಿನಲ್ಲಿ ತಿಳಿಸಿದೆ.

ಸಾರ್ವಜನಿಕ ಸೊತ್ತು ನಾಶ ಮಾಡಿಸಿ, ವಿಕೃತಿ ಮೆರೆಯಲು ಈತ ಮುಂದಾಗಿದ್ದಾನೆ. ದೇಶದ ಸಂವಿಧಾನ, ಕಾನೂನು ಮತ್ತು ಸಾಮರಸ್ಯಕ್ಕೆ ಪಂಥಾಹ್ವಾನ ನೀಡುವ ರೀತಿಯಲ್ಲಿ ವರ್ತಿಸುತ್ತಿದ್ದು, ಸಮಾಜಕ್ಕೆ ಕಂಕಟವಾಗಿ ಪರಿಣಮಿಸಿದ್ದಾನೆ. ಈತನ ವಿರುದ್ಧ ಕಾನೂನು ರೀತಿಯಲ್ಲಿ ಕೇಸು ದಾಖಲಿಸಿ, ಕೂಡಲೇ ಬಂಧಿಸಬೇಕು ಎಂದು ಮುಸ್ಲಿಂ ಜಸ್ಟೀಸ್ ಫೋರಮ್ ದ.ಕ. ಸಮಿತಿಯ ಅಧ್ಯಕ್ಷ ಡಾ.ಕೆ.ಎಸ್.ಅಮೀರ್ ಅಹ್ಮದ್ ತುಂಬೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುವ ನಿಯೋಗದಲ್ಲಿ ಮುಸ್ಲಿಂ ಜಸ್ಟೀಸ್ ಫೋರಮ್‌ನ ಸಂಸ್ಥಾಪಕ ರಫೀವುದ್ದೀನ್ ಕುದ್ರೋಳಿ, ಸಂಘಟನಾ ಕಾರ್ಯದರ್ಶಿ ವಹಾಬ್ ಕುದ್ರೋಳಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಇದ್ದೀನ್ ಕುಂಞಿ, ಇಕ್ಬಾಲ್ ಸಾಮಣಿಗೆ, ಯೂಸುಫ್ ಉಚ್ಚಿಲ್, ಇಮ್ರಾನ್ ಕುದ್ರೋಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News